ಇನ್ಮುಂದೆ ಯಾವುದೇ ಬ್ಯಾಂಕ್‌ನಿಂದ ಪಿಎಫ್‌ ಪಿಂಚಣಿ ಪಡೆಯಬಹುದು

– ಏಕೀಕೃತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದ ಕೇಂದ್ರ ಕಾರ್ಮಿಕ ಸಚಿವಾಲಯ

ನವದೆಹಲಿ: ಕೇಂದ್ರ ಕಾರ್ಮಿಕ ಸಚಿವಾಲಯವು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇನ್ಮುಂದೆ ಪಿಂಚಣಿದಾರರು ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ ಶಾಖೆಯಲ್ಲಿ ತಮ್ಮ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 1995ರ ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (ಸಿಪಿಪಿಎಸ್) ಹೊರತಂದಿದೆ ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ. ಇಪಿಎಫ್‌ಒ ವ್ಯಾಪ್ತಿಗೆ ಬರುವ 68 ಲಕ್ಷ ಪಿಂಚಣಿದಾರರಿಗೆ ಇದರಿಂದ ಲಾಭ ಆಗಲಿದೆ.

ಪಿಂಚಣಿದಾರರು ಪರಿಶೀಲನೆಗಾಗಿ ಇನ್ಮುಂದೆ ಬ್ಯಾಂಕ್‌ ಶಾಖೆಗೆ ಹೋಗುವ ಅವಶ್ಯಕತೆ ಇಲ್ಲ. ಬಿಡುಗಡೆಯಾಗುವ ಪಿಂಚಣಿ ಮೊತ್ತ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಪಿಂಚಣಿದಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ನೆಲೆಸಿದರೂ ತಮ್ಮ ಬ್ಯಾಂಕ್‌ ಬ್ರಾಂಚ್‌ ಬದಲಿಸುವ ಅಗತ್ಯವಿಲ್ಲ. ಅದಕ್ಕೆ ಬದಲಾಲಾಗಿ ದೇಶದ ಯಾವುದೇ ರಾಜ್ಯ, ಬ್ಯಾಂಕ್‌, ಶಾಖೆಯಿಂದ ಬೇಕಾದರೂ ಹಣ ಪಡೆಯಬಹುದು.

ಇದಕ್ಕೂ ಮುನ್ನ 1995ರ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. ಅದರ ಪ್ರಕಾರ, ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಪ್ರತಿ ವಲಯ ಅಥವಾ ಪ್ರಾಂತ್ಯದ ಇಪಿಎಫ್‌ಒ ಕಚೇರಿಗಳು 3-4 ಬ್ಯಾಂಕ್‌ಗಳೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಮೂಲಕವೇ ಹಣ ಪಡೆಯಬೇಕಿತ್ತು.