ರಾಜಣ್ಣ ಹೇಳಿಕೆಯನ್ನು ಇಡೀ ಕಾಂಗ್ರೆಸ್ ಖಂಡಿಸುತ್ತದೆ: ಡಿಕೆಶಿ

ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೇವೇಗೌಡರ ಬಗ್ಗೆ ರಾಜಣ್ಣ ವಿವಾದಾತ್ಮಕವಾಗಿ ಮಾತನಾಡಿರುವುದನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ನಾಯಕರಾದ ರಾಜಣ್ಣ ಅವರು ಹಿರಿಯ ನಾಯಕ ದೇವೇಗೌಡರ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪಕ್ಷದ ನಾಯಕನಾಗಿ, ವೈಯಕ್ತಿಕವಾಗಿಯೂ ಇದನ್ನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.

ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು. ನಾವು ದೇವೇಗೌಡರನ್ನು ಬಹಳ ಗೌರವಯುತವಾಗಿ ಕಾಣುತ್ತಿದ್ದೇವೆ. ಅಂತಹ ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಕೂಡಲೇ ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರುವಂತೆ ಸೂಚನೆ ನೀಡುತ್ತೇನೆ. ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಪೂಜ್ಯ ಸಮಾನರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ

DK SHIVAKUMAR

ಕ್ಷಮೆಗೆ ಡಿ.ಕೆ ಸುರೇಶ್ ಆಗ್ರಹ:
ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕೆ.ಎನ್ ರಾಜಣ್ಣ ಅವರು ನೀಡಿರುವ ಹೇಳಿಕೆ ಖಂಡನೀಯ. ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣ ಅವರ ಘನತೆಗೆ ಸೂಕ್ತವಲ್ಲ. ರಾಜಣ್ಣ ಅವರು ಕೂಡಲೇ ಕ್ಷಮೆ ಕೋರಬೇಕು. ಇದು ಅವರ ವೈಯಕ್ತಿಕ ಹೇಳಿಕೆಯಾದರೂ, ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುರೇಶ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದೇವೇಗೌಡ ಬಗ್ಗೆ ಮಾತಾಡಿದ್ರೆ ಹುಷಾರ್ – ಅವರ ಮಗ ನಾನು ಬದುಕಿದ್ದೇನೆ: ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೆಚ್.ಡಿ ದೇವೇಗೌಡರ ಬಗ್ಗೆ ವ್ಯಂಗ್ಯ ಮಾಡಿದ್ದ ಕೆ.ಎನ್ ರಾಜಣ್ಣ, ಅವರು ಈಗಲೇ ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗುತ್ತಾರೆ. ನಾಲ್ವರ ಮೇಲೆ ಹೋಗುವ ದಿನ ಹತ್ತಿರದಲ್ಲೇ ಇದೆ ಎಂದು ವಿವಾದಾತ್ಮಕವಾಗಿ ಹೇಳಿದ್ದರು. ರಾಜಣ್ಣ ಹೇಳಿಕೆಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

Live Tv

Comments

Leave a Reply

Your email address will not be published. Required fields are marked *