ಮೊದಲ ಟೆಸ್ಟ್‌ನಲ್ಲೇ 41 ವರ್ಷದ ದಾಖಲೆ ಉಡೀಸ್‌ – 9ನೇ ಕ್ರಮಾಂಕದಲ್ಲಿ ಲಂಕಾ ಆಟಗಾರನ ಸಾಧನೆ

ಮ್ಯಾಂಚೆಸ್ಟರ್: ಶ್ರೀಲಂಕಾದ (Srilanka) ಕ್ರಿಕೆಟ್ ಆಟಗಾರ ಮಿಲನ್ ರಥನಾಯಕೆ (Milan Rathnayake) ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ (Test Cricket) ದಾಖಲೆ ನಿರ್ಮಿಸಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ರಥನಾಯಕೆ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಪ್ರಭಾತ್ ಜಯಸೂರ್ಯ ಔಟಾದ ನಂತರ 9ನೇ ಕ್ರಮಾಂಕದಲ್ಲಿ  ಇಳಿದ ಅವರು 135 ಎಸೆತದಲ್ಲಿ 72 ರನ್ ಸಿಡಿಸಿದರು. ಈ ಮೂಲಕ 41 ವರ್ಷದ ನಂತರ 1983ರ ಭಾರತದ ವಿಶ್ವಕಪ್ ಸ್ಟಾರ್ ಕ್ರಿಕೆಟಿಗ ಬಲ್ವಿಂದರ್ ಸಿಂಧು ಅವರ ಹೆಸರಿನಲ್ಲಿದ್ದ ದಾಖಲೆ ಮುರಿದರು.

ಬಲ್ವಿಂದರ್ ಸಿಂಧು (Balwinder Sandhu) 1983ರಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 71 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈಗ ಶ್ರೀಲಂಕಾದ ಆಟಗಾರ ಮಿಲನ್ ರಥನಾಯಕೆ ಕೂಡ 9ನೇ ಕ್ರಮಾಂಕದಲ್ಲಿ ಬ್ಯಾಟ್‌ಗೆ ಇಳಿದು 72 ರನ್ ಸಿಡಿಸಿ ಔಟಾದರು.

9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಥನಾಯಕೆ ನಾಯಕ ಧನಂಜಯ್ ಜೊತೆ 63 ರನ್‌ ಜೊತೆಯಾಟವಾಡಿದ್ದರು. ನಂತರ ಧನಂಜಯ್ 8ನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಗೆ ಶೋಯಬ್ ಬಶೀರ್ ಎಸೆದ ಸ್ಪಿನ್ ಬೌಲಿಂಗ್‌ಗೆ ಕ್ಯಾಚ್ ಕೊಟ್ಟು ಔಟಾದರು. ಇದನ್ನೂ ಓದಿ: ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

ನಾಯಕ ಧನಂಜಯ್ ಡಿಸಿಲ್ವಾ 84 ಎಸೆತದಲ್ಲಿ 74 ರನ್ (8 ಬೌಂಡರಿ), ಮಿಲನ್ ರಥನಾಯಕೆ 135 ಎಸೆತದಲ್ಲಿ 72 ರನ್ (2 ಸಿಕ್ಸ್, 6 ಬೌಂಡರಿ), ಕುಸಾಲ್ ಮೆಂಡಿಸ್ 34 ಎಸೆತದಲ್ಲಿ 24 ರನ್ (4 ಬೌಂಡರಿ) ಗಳಿಸಿದರು. ಇನ್ನುಳಿದ ಆಟಗಾರರು ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲದೇ ಪೆವಿಲಿಯನ್ ಸೇರಿದರು.

ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 74 ಓವರ್‌ಗೆ 236 ರನ್ ಗಳಿಸಿ ಆಲೌಟ್ ಆಗಿದೆ. ಕ್ರಿಸ್ ವೋಕ್ಸ್ ಮತ್ತು ಶೋಯಬ್ ಬಶೀರ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರೆ, ಗಟ್ ಅಸ್ಕಿನ್ಸನ್ 2 ಮತ್ತು ಮಾರ್ಕ್ ವುಡ್ 1 ವಿಕೆಟ್ ಪಡೆದರು.