4ನೇ ಟೆಸ್ಟ್ ಮೊದಲ ದಿನವೇ ನಿರ್ಮಾಣವಾಯ್ತು ಹಲವು ದಾಖಲೆ

ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246 ರನ್ ಗಳಿಗೆ ಅಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸಿದೆ. ಇದೇ ವೇಳೆ ಮೊದಲ ದಿನದಲ್ಲಿ ದಾಖಲಾದ ಕೆಲ ಇನ್‍ಟ್ರೆಸ್ಟಿಂಗ್ ದಾಖಲೆಗಳ ಅಂಕಿ ಅಂಶಗಳು ಇಂತಿದೆ.

5 ಬೌಲರ್: ಟೀಂ ಇಂಡಿಯಾ ಪರ 5 ಬೌಲರ್ ಗಳು ಮೊದಲ ಬಾರಿಗೆ ಟೆಸ್ಟ್ ಸರಣಿಯೊಂದರಲ್ಲಿ 10 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಜಸ್‍ಪ್ರೀತ್ ಬುಮ್ರಾ 3, ಶರ್ಮಾ, ಮಹಮ್ಮದ್ ಶಮಿ, ಅಶ್ವಿನ್ ತಲಾ 2, ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದ್ದಾರೆ.

23 ಬೈ ರನ್: ಮೊದಲ ದಿನದಾಟದ ವೇಳೆ ಟೀಂ ಇಂಡಿಯಾ 23 ಬೈ ರನ್ ನೀಡಿದ್ದು, ಕಳೆದ 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ಆರಂಭಿಕ ದಿನವೇ ಟೀಂ ಇಂಡಿಯಾ ಹೆಚ್ಚು ಬೈ ರನ್ ನೀಡಿದೆ. ಈ ಹಿಂದೆ 1964 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೊದಲ ದಿನ 29 ಬೈ ರನ್ ನೀಡಿತ್ತು.

39 ಟೆಸ್ಟ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 39 ಟೆಸ್ಟ್ ಪಂದ್ಯಗಳ ಬಳಿಕ ಮೊದಲ ಬಾರಿಗೆ ಆಡುವ 11 ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಗ್ರೇಮ್ಸ್ ಸ್ಮಿತ್ ತಮ್ಮ ನಾಯಕತ್ವದ 44 ಪಂದ್ಯಗಳ ಬಳಿಕ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದರು.

86 ಟೆಸ್ಟ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತಮ್ಮ 86ನೇ ಟೆಸ್ಟ್ ಪಂದ್ಯದಲ್ಲಿ 250 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಭಾರತದ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

200 ಕ್ಯಾಚ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 200 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ 200 ಕ್ಯಾಚ್ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *