ENG vs PAK | ಬರೋಬ್ಬರಿ 823 ರನ್‌ ಸಿಡಿಸಿ ಸಾಧನೆಗೈದ ಇಂಗ್ಲೆಂಡ್‌

– ವೆಸ್ಟ್‌ ಇಂಡೀಸ್‌ ದಾಖಲೆ ಉಡೀಸ್‌

ಮುಲ್ತಾನ್: ಪಾಕಿಸ್ತಾನ (Pakistan) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಕ್ರಿಕೆಟ್‌ (Cricket) ಪಂದ್ಯದಲ್ಲಿ ಇಂಗ್ಲೆಂಡ್‌ (England) ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 823 ರನ್‌ ಗಳಿಸುವ ಮೂಲಕ ವಿಶೇಷ ಸಾಧನೆಗೈದಿದೆ.

ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ್ದ ಪಾಕ್‌ ತಂಡ 556 ರನ್‌ ಗಳಿಸಿತ್ತು. ನಂತರ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ 7 ವಿಕೆಟ್‌ ನಷ್ಟಕ್ಕೆ 823 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲೇ 4ನೇ ಗರಿಷ್ಠ ರನ್‌ ಕಲೆ ಹಾಕಿದ ತಂಡವಾಗಿ ಹೊರಹೊಮ್ಮಿತು.

ಇದಕ್ಕೂ ಮೊದಲು 1958ರಲ್ಲಿ 790 ರನ್‌ ಗಳಿಸಿ 4ನೇ ಸ್ಥಾನದಲ್ಲಿತ್ತು. ಇದೀಗ ವೆಸ್ಟ್‌ ಇಂಡೀಸ್‌ ದಾಖಲೆಯನ್ನು ಇಂಗ್ಲೆಂಡ್ ಉಡೀಸ್‌ ಮಾಡಿದೆ. ಇಷ್ಟೇ ಅಲ್ಲದೇ ಅಧಿಕ ರನ್‌ಗಳನ್ನು ಗಳಿಸಿದ ಪಟ್ಟಿಯಲ್ಲಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿ ಇಂಗ್ಲೆಂಡ್‌ ತಂಡವೇ ಇದೆ.

ಇಂಗ್ಲೆಂಡ್‌ ಪರ ಹ್ಯಾರಿ ಬ್ರೂಕ್ 322 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 317 ರನ್‌ ಸಿಡಿಸಿದರು. ಜೋ ರೂಟ್ 375 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ 262 ರನ್‌ ಕಲೆ ಹಾಕಿದರು.

ತಂಡಕ್ಕೆ ಬೆನ್ ಡಕೆಟ್ 84, ಝಾಕ್ ಕ್ರಾಲಿ 78, ಜೇಮೀ ಸ್ಮಿತ್ 31 ರನ್‌ಗಳ ಕೊಡುಗೆ ಕೊಟ್ಟರು. ಕ್ರಿಸ್ ವೋಕ್ಸ್ 17, ಬ್ರೈಡನ್ ಕಾರ್ಸೆ 9 ರನ್‌ಗಳನ್ನು ಕೊಡುಗೆ ನೀಡಿ ಅಜೇಯರಾಗಿ ಉಳಿದರು.

ಇಂಗ್ಲೆಂಡ್‌ ವಿರುದ್ಧ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಪಾಕ್‌ ತಂಡ 5 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಿದೆ. ಶುಕ್ರವಾರ 5ನೇ ದಿನವಾಗಿದ್ದು ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ.