ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

ಲಂಡನ್: ಇಂಗ್ಲೆಂಡ್‍ನ ಎಡಗೈ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ನೆಚ್ಚಿನ ವಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ವಂತೆ. ‘ಮಿಸ್ಟರ್ 360’ ಖ್ಯಾತಿಯ ಕೆ.ಎಲ್.ರಾಹುಲ್ ಅವರು ರಶೀದ್ ನೆಚ್ಚಿನ ವಿಕೆಟ್ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರಿವೀಲ್ ಮಾಡಿದೆ.

2018ರಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಪಿನ್ನರ್ ಆದಿಲ್ ರಶೀದ್ ನೀಡಿದ ಅದ್ಭುತ ಎಸೆತ ಹಾಗೂ ವಿಕೆಟ್ ಕಿತ್ತ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿತ್ತು. ಅದೊಂದು ಅದ್ಭುತ ಎಸೆತವಾಗಿತ್ತು. ಆದಾಗ್ಯೂ ಇಂಗ್ಲಿಷ್ ಸ್ಪಿನ್ನರ್ ರಶೀದ್ ಅವರ ನೆಚ್ಚಿನ ಎಸೆತ ಹಾಗೂ ವಿಕೆಟ್ ಭಾರತೀಯ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎಂದು ಹೇಳಿದೆ.

ಭಾರತವು 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಟೆಸ್ಟ್ ಪಂದ್ಯದಲ್ಲಿ ಆದಿಲ್ ರಶೀದ್ ಅವರು ಅದ್ಭುತವಾಗಿ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆದಿದ್ದರು. ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶನಿವಾರ ಟ್ವೀಟ್ ಮಾಡಿದೆ.

ಆದಿಲ್ ರಶೀದ್ ಎಸೆದ ಬಾಲ್ ಪ್ಯಾಚ್ ರೀತಿಯಲ್ಲಿ ಲೆಗ್ ಸೈಡ್‍ಗೆ ಬಿದ್ದು ಸ್ಪಿನ್ ಆಗಿ ವಿಕೆಟ್‍ಗೆ ಬಿದ್ದಿತ್ತು. ಪರಿಣಾಮ 150 ರನ್ ಪೂರೈಸಲು ಜಸ್ಟ್ 1 ರನ್ ಬೇಕಿದ್ದಾಗಲೇ ರಾಹುಲ್ ವಿಕೆಟ್ ಕಳೆದುಕೊಂಡಿದ್ದರು.

ಈ ಪಂದ್ಯವು ಟೆಸ್ಟ್ ಸರಣಿಯ 5ನೇ ಪಂದ್ಯವಾಗಿತ್ತು. 223 ಎಸೆತಗಳಲ್ಲಿ 149 ರನ್ ಗಳಿಸಿದ್ದ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಜೊತೆಗೆ ಅಂದಿನ ಅಂತಿಮ ಓವರ್ ವರೆಗೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ರಶೀದ್ ಅವರ ಮಾಂತ್ರಿಕ ಎಸೆತದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತದ ಇಂಗ್ಲೆಂಡ್ ವಿರುದ್ಧ 118 ರನ್‍ಗಳಿಂದ ಸೋಲು ಕಂಡಿತ್ತು. ಅಷ್ಟೇ ಅಲ್ಲದೆ ಟೀಂ ಇಂಡಿಯಾ ಸರಣಿಯನ್ನು 4-1 ಅಂತರದಿಂದ ಸೋತಿತ್ತು.

Comments

Leave a Reply

Your email address will not be published. Required fields are marked *