ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

ತಿರುವನಂತಪುರಂ: ಕೇರಳ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ವೇತನ ಸಹಿತ ಪ್ರಸೂತಿ ರಜೆಯನ್ನು ಕೇರಳ ಸರ್ಕಾರ ಕಲ್ಪಿಸಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕಿಯರಿಗೆ 26 ವಾರಗಳ ಕಾಲ ಮಾತ್ರ ವೇತನ ಸಹಿತ ರಜೆ ಸಿಗುತ್ತಿತ್ತು. ಆದರೆ ಈ ಸೌಲಭ್ಯ ಕೇರಳದ ಖಾಸಗಿ ಶಾಲಾ ಶಿಕ್ಷಕಿಯರಿಗೂ ಅನ್ವಯವಾಗಲಿದೆ. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ ಅಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಪ್ರಸೂತಿ ರಜೆ ನೀಡಬೇಕೆಂದು ದೀರ್ಘಕಾಲದಿಂದ ಒತ್ತಾಯಿಸಿದ್ದರು. ಈ ವಿಚಾರವಾಗಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮತಿ ಕೋರಿತ್ತು. ಸದ್ಯ ಕೇಂದ್ರ ಸರ್ಕಾರವು ಇದಕ್ಕೆ ಅನುಮೋದನೆ ನೀಡಿದೆ.

ಹೊಸ ಕಾಯ್ದೆ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ಶಿಕ್ಷಕಿಯರು, ಮಹಿಳಾ ಉದ್ಯೋಗಿಗಳು ಈಗಿನಿಂದ ಸರ್ಕಾರಿ ಶಾಲಾ ಶಿಕ್ಷಕಿಯರು ಹಾಗೂ ಮಹಿಳಾ ಉದ್ಯೋಗಿಗಳಂತೆ 26 ವಾರಗಳ ಮಾತೃತ್ವ ರಜೆ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಯು ಉದ್ಯೋಗಿಗೆ ತಿಂಗಳಿಗೆ 1,000 ರೂ.ಗಳ ವೈದ್ಯಕೀಯ ಭತ್ಯೆಯನ್ನು ಸಹ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ 1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ಯು ಉದ್ಯೋಗದಲ್ಲಿರುವ ತಾಯಂದಿರಿಗೆ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯ ಕಲ್ಪಿಸಿಕೊಟ್ಟಿತು. ಆದರೆ ಅಗತ್ಯದಷ್ಟು ರಜೆ, ಶಿಶುವಿಗೆ ಹಾಲುಣಿಸಲು ಬಿಡವು, ಕುಂದು ಕೊರತೆಗಳನ್ನಾಲಿಸಲು ಸೌಲಭ್ಯಗಳಿಲ್ಲದೆಯೇ ಕಾನೂನು ಅಪೂರ್ಣವಾಗಿತ್ತು. ಇದರಿಂದಾಗಿ 2017ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, 26 ವಾರಗಳ (ಆರು ತಿಂಗಳು) ಹೆರಿಗೆ ರಜೆಯನ್ನು ಮೊದಲ ಎರಡು ಹೆರಿಗೆಗೆ ನೀಡಲಾಗಿದೆ.

ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ಕನಿಷ್ಠ ವೇತನ ಪ್ರಮಾಣವನ್ನು ನಿಗದಿಪಡಿಸುವತ್ತ ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ 29ರಂದು ಕರೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ಚರ್ಚೆಯಾಗಿದೆ. ಈ ಮೂಲಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಕಾರ್ಮಿಕರ ಪ್ರಸ್ತುತ ನಿಗದಿತ ವೇತನ ಭತ್ಯೆಯನ್ನು ದಿನಕ್ಕೆ 150 ರೂ.ಗಳಿಂದ 600 ರೂ.ಗೆ ಹೆಚ್ಚಿಸಲು ಕೇರಳ ಸರ್ಕಾರ ಒತ್ತಾಯಿಸಿದೆ.

Comments

Leave a Reply

Your email address will not be published. Required fields are marked *