ಬಾಗಲಕೋಟೆ: ಹಾಡಹಗಲೇ ಬಾರಿನಲ್ಲಿ ಶರ್ಟ್ ಬಿಚ್ಚಿಹಾಕಿ, ರಾಜಾರೋಷವಾಗಿ ಮದ್ಯ ಸೇವಿಸುತ್ತಾ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡುವ ಸಾಮಗ್ರಿಗಳ ಬಿಲ್ ಬರೆಯುತ್ತಿದ್ದ ಖಾಸಗಿ ಕಂಪೆನಿಯ ನೌಕರನಿಗೆ ಸ್ಥಳೀಯರು ತಪರಾಕಿ ಹಾಕಿ ಥಳಿಸಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.
ಫಾರ್ಚ್ಯೂನ್ ಸೇಲ್ಸ್ ಕಾರ್ಪೋರೇಷನ್ ಕಂಪೆನಿಯ ನೌಕರ ಮಂಜುನಾಥ್ ಹಲ್ಲೆಗೊಳಗಾದ ನೌಕರ. ಮಂಜುನಾಥ್ ಹಾಡುಹಗಲೇ ನಗರದ ಬಾರಿನಲ್ಲಿ ಕುಳಿತು, ತನ್ನ ಶರ್ಟ್ ಬಿಚ್ಚಿ ಹಾಕಿ, ಬನಿಯಾನ್ ನಲ್ಲೇ ಕುಳಿತು ಮದ್ಯ ಕುಡಿಯುತ್ತಿದ್ದನು. ಜೊತೆಗೆ ಅಲ್ಲೇ ರೈತರ ಕೃಷಿ ಭಾಗ್ಯ ಯೋಜನೆಯ ಸಾಮಗ್ರಿಗಳ ಡಿ.ಡಿ ಲಿಸ್ಟ್ ಗಳ ಬಿಲ್ ಬರೆಯುತ್ತಿದ್ದನು.
ಆಶ್ಚರ್ಯ ವ್ಯಕ್ತಪಡಿಸಿದ ಜನರು ಆತನನ್ನ ವಿಚಾರಿಸಿದಾಗ ಖಾಸಗಿ ನೌಕರ ಮಂಜುನಾಥ್‍ನ ನಿಜ ಬಣ್ಣ ಬಯಲಾಗಿದೆ. ರೈತರ ಹೊಲಗಳಿಗೆ ತೆರಳಿ ಸಾಮಗ್ರಿಗಳು ರೈತನಿಗೆ ತಲುಪಿದೆಯೋ ಇಲ್ಲವೋ ಎಂದು ಖಾತರಿ ಪಡಿಸಿಕೊಂಡು ಡಿಡಿ ಬಿಲ್ ಬರೆಯುವ ಬದಲು, ಮಂಜುನಾಥ್ ಬಾರಿನಲ್ಲಿ ಕುಳಿತು ಸರ್ಕಾರ ರೈತರ ಹೆಸರಲ್ಲಿ ಕಳಿಸಿರುವ ಡಿಡಿ ಲಿಸ್ಟ್ ಗಳ ಬಿಲ್ ಬರೆಯುತ್ತಿದ್ದನು. ಇದನ್ನ ಕಂಡು ಸ್ಥಳೀಯರು, ಇದರಲ್ಲಿ ದೊಡ್ಡ ಮಾಫಿಯಾ ನಡೆಯುತ್ತಿದೆ. ರೈತರ ಹೆಸರಲ್ಲಿ ನಡೆಯುವ ಮಹಾ ಮೋಸ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಖಾಸಗಿ ನೌಕರ ಮಂಜುನಾಥ್‍ನಿಗೆ ಬಾರ್ ನಲ್ಲಿಯೇ ತಪರಾಕಿ ಹಾಕಿ, ಮಾನ ಹರಾಜು ಮಾಡಿದ್ದಾರೆ. ನಂತರ ಆತನನ್ನ ಬಾಗಲಕೋಟೆ ಶಹರ ಪೊಲೀಸ್ ಠಾಣೆಗೆ ಕರೆತಂದು, ಆತನ ಮೇಲೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ.

Leave a Reply