ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಆಟ – ಫೈನಲ್ ಆಡಿ ಹೆಮ್ಮೆ ತರ್ತೀನಿ ಎಂದಿದ್ದ ಆಟಗಾರ್ತಿ

ಮಿಜೋರಾಂ: ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್ರೆಮ್ಸಿಯಾಮಿ ತನ್ನ ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಹಾಕಿ ಆಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸೋಮವಾರ ಹೀರೋಶಿಮಾದಲ್ಲಿ ನಡೆದ ಎಫ್‍ಐಎಚ್ ಸೀರಿಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹಾಕಿ ಸ್ಟ್ರೈಕರ್ ಆಗಿರುವ ಲಾಲ್ರೆಮ್ಸಿಯಾಮಿ ಪಂದ್ಯ ಗೆದ್ದ ಬಳಿಕ ಮಂಗಳವಾರ ತಮ್ಮ ಊರಿಗೆ ಮರಳಿದ್ದಾರೆ. ಈ ವೇಳೆ ಅಲ್ಲಿನ ಜನರು ಲಾಲ್ರೆಮ್ಸಿಯಾಮಿಗೆ ಸ್ವಾಗತ ಕೋರಿ ಅಭಿನಂದನೆ ತಿಳಿಸಿದರು. ತಂದೆ ನಿಧನದ ಬಳಿಕ ಊರಿಗೆ ಬಂದ ಲಾಲ್ರೆಮ್ಸಿಯಾಮಿರನ್ನು ನೋಡಿ ಮನೆಯವರು ಕಣ್ಣೀರು ಹಾಕಿದ್ದಾರೆ.

ಸೆಮಿಫೈನಲ್ ಹಿಂದಿನ ದಿನ ಅಂದರೆ ಶುಕ್ರವಾರ ಲಾಲ್ರೆಮ್ಸಿಯಾಮಿ ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆ ಸಾವಿನ ವಿಷಯ ತಿಳಿದ ಲಾಲ್ರೆಮ್ಸಿಯಾಮಿ ಊರಿಗೆ ಮರಳದೇ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ತನ್ನ ತಂದೆಗೆ ಹೆಮ್ಮೆ ತರುತ್ತೇನೆ ಎಂದು ತಂಡದ ಕೋಚ್ ಆದ ಸ್ಜೊರ್ಡ್ ಮಾರಿಜ್ನೆ ಅವರ ಬಳಿ ಹೇಳಿಕೊಂಡಿದ್ದರು.

ಫೈನಲ್ ನಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ಹೀರೋಶಿಮಾದಿಂದ ದೆಹಲಿಗೆ ತಲುಪಿತು. ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ತಂದೆಯ ನಿಧನದ ನಡುವೆಯೂ ತಂಡಕ್ಕಾಗಿ ಆಡಿದ ಲಾಲ್ರೆಮ್ಸಿಯಾಮಿ ಅವರನ್ನು ಶ್ಲಾಘಿಸಿದರು. ಅಲ್ಲದೆ ಕಿರಣ್ ಅವರು ಭಾರತ ಹಾಕಿ ತಂಡದ ಸದಸ್ಯರನ್ನು ಭೇಟಿಯಾಗಿ ಶುಭಾಶಯ ಕೂಡ ತಿಳಿಸಿದರು.

ಕಿರಣ್ ರಿಜಿಜು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ಹಾಕಿ ತಂಡಕ್ಕೆ ಶುಭಾಶಯ ತಿಳಿಸಿದರು. ಹಾಕಿ ತಂಡದ ನಾಯಕಿ ರಾಣಿ ರಾಮ್‍ಪಾಲ್ ಟೂರ್ನ್‍ಮೆಂಟ್‍ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *