ಜೇಟ್ಲಿ ಕೇಸ್ – ನನಗೆ ಮುಜುಗರವಾಗಿದೆ, ಇನ್ಮುಂದೆ ಕೇಜ್ರಿವಾಲ್ ಪರ ವಾದ ಮಾಡಲ್ಲ ಎಂದ ವಕೀಲ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ಇನ್ಮುಂದೆ ವಾದ ಮಾಡುವುದಿಲ್ಲ ಎಂದು ವಕೀಲರಾದ ಅನೂಪ್ ಜಾರ್ಜ್ ಚೌಧರಿ ಶುಕ್ರವಾರದಂದು ಹೇಳಿದ್ದಾರೆ.

ಈ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಚೌಧರಿ ಪತ್ರ ಬರೆದಿದ್ದು, ನನಗೆ ಸಮರ್ಪಕ ಮಾಹಿತಿ ನೀಡದ ಕಾರಣ ಫೆಬ್ರವರಿ 12ರಂದು ಮುಜುಗರದ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.

ಚೌಧರಿ ಅವರಿಗೂ ಮುನ್ನ ಈ ಹಿಂದೆ ಹಿರಿಯ ವಕೀಲರಾದ ರಾಮ್ ಜೇಠ್ಮಲಾನಿ ಕೇಜ್ರಿವಾಲ್ ಪರ ವಾದ ಮಾಡಲು ನಿರಾಕರಿಸಿದ್ದರು. ದೆಹಲಿ ಸಿಎಂ ಕೇಜ್ರಿವಾಲ್ ಜೇಟ್ಲಿ ಅವರನ್ನ ವಂಚಕ ಎಂದು ಕರೆಯುವಂತೆ ಹೇಳಿದ್ದರು. ಅರುಣ್ ಜೇಟ್ಲಿ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ವಂಚಕ ಎಂಬ ಪದಕ್ಕಿಂತಲೂ ಕೆಟ್ಟ ಪದಗಳನ್ನ ಬಳಸಿದ್ದಾರೆ ಎಂದು ಜೇಠ್ಮಲಾನಿ ಹೇಳಿದ್ದರು. ಕೇಜ್ರಿವಾಲ್ ನನಗೆ ಕೊಡಬೇಕಿರುವ 2 ಕೋಟಿ ರೂ. ಶುಲ್ಕದ ಹಣವನ್ನ ಮನ್ನಾ ಮಾಡಬಹುದು. ಸಾವಿರಾರು ಜನರಿಗೆ ನಾನು ಉಚಿತವಾಗಿ ಕೆಲಸ ಮಾಡೋ ಕಾರಣ ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಜೇಠ್ಮಲಾನಿ ಹೇಳಿದ್ದರು.

ಜೇಠ್ಮಲಾನಿ ಹಿಂದಕ್ಕೆ ಸರಿದಿದ್ದು ಯಾಕೆ?: ದೆಹಲಿ ಹೈಕೋರ್ಟ್ ನಲ್ಲಿ2017 ಮೇ 17ರಂದು ನಡೆದ ವಿಚಾರಣೆ ವೇಳೆ ಜೇಠ್ಮಲಾನಿ ಜೇಟ್ಲಿ ವಿರುದ್ಧ ವಂಚಕ ಪದವನ್ನು ಬಳಕೆ ಮಾಡಿದ್ದರು. ಕೋರ್ಟ್ ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸಂಬಂಧ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರಕ್ಕೆ ಆಗ್ರಹ ಮಾಡಿದ್ದರು. ಈ ಕೇಸ್ ದಾಖಲಾದ ಬಳಿಕ ಅರವಿಂದ್ ಕೇಜ್ರಿವಾಲ್ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿದ್ದರು. ನಾನು ಅರುಣ್ ಜೇಟ್ಲಿ ಪರ ಆಕ್ಷೇಪಾರ್ಹ ಪದವನ್ನು ಬಳಕೆ ಮಾಡುವಂತೆ ಯಾವುದೇ ಸೂಚನೆ ನೀಡಿರಲಿಲ್ಲ. ಒಬ್ಬ ಹಿರಿಯ ವಕೀಲರಿಗೆ ನಾನು ಆಕ್ಷೇಪಾರ್ಹ ಪದವನ್ನು ಬಳಸುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಅಫಿಡವಿತ್‍ನಲ್ಲಿ ಉಲ್ಲೇಖಿಸಿದ್ದರು.

ಕೇಜ್ರಿವಾಲ್ ಪರ ವಾದ ಮಾಡುವುದಕ್ಕೆ ನಾನು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ ಎಂದು ಜೇಠ್ಮಲಾನಿ ಈ ಹಿಂದೆ ತಿಳಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಜೇಠ್ಮಲಾನಿ ಹಾಜರಾಗಿದ್ದಕ್ಕೆ, ದೆಹಲಿ ಸರ್ಕಾರ ಕಳೆದ ವರ್ಷ ಫೆಬ್ರವರಿಯಲ್ಲಿ 3.5 ಕೋಟಿ ರೂ. ಪಾವತಿಸಿತ್ತು. ಒಂದು ಬಾರಿ ಜೇಠ್ಮಲಾನಿ ಕೋರ್ಟ್ ಗೆ ಹಾಜರಾದರೆ 22 ಲಕ್ಷ ರೂ. ಶುಲ್ಕವನ್ನು ಪಾವತಿಸಬೇಕಿತ್ತು ಎಂದು ಮಾಧ್ಯಮಗಳು ವರದಿ ಮಾಡಿತ್ತು.

ಏನಿದು ಪ್ರಕರಣ?: ಅರುಣ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಆರೋಪಿಸಿತ್ತು. ಇದರ ವಿರುದ್ಧ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ, ಅಶುತೋಶ್ ಹಾಗೂ ದೀಪಕ್ ಬಾಜ್ಪೈ ಅವರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ ಎರಡು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಸುಳ್ಳು ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೇಜ್ರಿವಾಲ್ ಹಾಗೂ ಇತರೆ ಮುಖಂಡರ ಮೇಲೆ ಜೇಟ್ಲಿ ಸಿವಿಲ್ ಕೇಸ್ ಹಾಕಿದ್ದರು.

Comments

Leave a Reply

Your email address will not be published. Required fields are marked *