‘ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್‌

ಸರ್ಕಾರದ ಖರ್ಚು ವಿಧೇಯಕಕ್ಕೆ ವಿರೋಧ; ಡೊನಾಲ್ಡ್ ಟ್ರಂಪ್ – ಎಲಾನ್ ಮಸ್ಕ್ ನಡುವೆ ಸಂಘರ್ಷ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಉದ್ಯಮಿ ಎಲಾನ್ ಮಸ್ಕ್‌ (Elon Musk) ನಡುವೆ ಸಂಘರ್ಷ ಏರ್ಪಟ್ಟಿದೆ. ಸರ್ಕಾರದ ಖರ್ಚು ವಿಧೇಯಕದ ವಿರುದ್ಧ ಮಸ್ಕ್ ವ್ಯಕ್ತಪಡಿಸಿದ ಟೀಕೆಗೆ ಪ್ರತಿಕ್ರಿಯೆಯಾಗಿ, ಟ್ರಂಪ್, ಮಸ್ಕ್‌ರ ಸ್ಪೇಸ್‌ಎಕ್ಸ್‌ನ ರಾಕೆಟ್ ಉಡಾವಣೆಗಳು ಮತ್ತು ಟೆಸ್ಲಾದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ತಡೆಯುವ ಬೆದರಿಕೆ ಹಾಕಿದ್ದಾರೆ.

ಟ್ರಂಪ್ ತಮ್ಮ ಹೇಳಿಕೆಯಲ್ಲಿ, ಮಸ್ಕ್‌ ಕಂಪನಿಗಳಿಗೆ ಸಂಬಂಧಿಸಿದ ಒಪ್ಪಂದಗಳನ್ನು ಸರ್ಕಾರ ರದ್ದುಗೊಳಿಸಬಹುದು ಎಂದು ಸೂಚಿಸಿದ್ದಾರೆ. ಮಸ್ಕ್‌ ಎಕ್ಸ್‌ನಲ್ಲಿ ಖರ್ಚು ವಿಧೇಯಕದ ವಿರುದ್ಧ ಟೀಕೆ ಮಾಡಿದ್ದು, ಟ್ರಂಪ್‌ರ ಕೋಪಕ್ಕೆ ಕಾರಣವಾಗಿದೆ. ಈ ವಿಧೇಯಕವು ಸರ್ಕಾರದ ವಿವಿಧ ಯೋಜನೆಗಳಿಗೆ ಧನಸಹಾಯವನ್ನು ಒದಗಿಸುತ್ತದೆ, ಆದರೆ ಮಸ್ಕ್ ಇದನ್ನು ವಿಪರೀತ ಖರ್ಚು ಎಂದು ಟೀಕಿಸಿದ್ದಾರೆ.

ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ‘ಎಲಾನ್ ಮಸ್ಕ್ ಅವರು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬಲವಾಗಿ ಅನುಮೋದಿಸುವ ಬಹಳ ಹಿಂದೆಯೇ, ನಾನು EV ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಅವರಿಗೆ ತಿಳಿದಿತ್ತು. ಇದು ಹಾಸ್ಯಾಸ್ಪದ ಮತ್ತು ಅದು ಯಾವಾಗಲೂ ನನ್ನ ಅಭಿಯಾನದ ಪ್ರಮುಖ ಭಾಗವಾಗಿತ್ತು. ಎಲೆಕ್ಟ್ರಿಕ್ ಕಾರುಗಳು ಸರಿ, ಆದರೆ ಎಲ್ಲರೂ ಒಂದನ್ನು ಹೊಂದಲು ಒತ್ತಾಯಿಸಬಾರದು’ ಎಂದು ಹೇಳಿದರು.  ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

ಇತಿಹಾಸದಲ್ಲಿ ಬೇರೆ ಯಾರು ಪಡೆತದಷ್ಟು ಹೆಚ್ಚು ಸರ್ಕಾರಿ ನೆರವು ಮಸ್ಕ್ ಪಡೆದಿದ್ದಾರೆ ಎಂದು ಟ್ರಂಪ್ ಆರೋಪಿಸಿದರು. ಸಬ್ಸಿಡಿ ಕೊಡದಿದ್ದರೆ ಎಲಾನ್ ಬಹುಶಃ ಅಂಗಡಿಯನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಿತ್ತು ಎಂದು ಕುಟುಕಿದ್ದಾರೆ. ಮಸ್ಕ್ ನೇತೃತ್ವ ವಹಿಸಿದ್ದ ಸರ್ಕಾರಿ ದಕ್ಷತೆ ಇಲಾಖೆಯಾದ DOGEಯ ತನಿಖೆ ನಡೆಸಬೇಕು ಎಂದರು.

ಟ್ರಂಪ್ ಆಕ್ಷೇಪದ ಬೆನ್ನಲೆ X ನಲ್ಲಿ ಈ ಬಗ್ಗೆ ಮಸ್ಕ್ ಸರಣಿ ಪೋಸ್ಟ್‌ಗಳಲ್ಲಿ ಮಾಡಿದ್ದಾರೆ. ಇದರಲ್ಲಿ ಖರ್ಚು ಯೋಜನೆಯನ್ನು ಬೆಂಬಲಿಸಿದ ಸೆನೆಟ್‌ಗಳನ್ನು ಗುರಿಯಾಗಿಸಿಕೊಂಡರು. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಪ್ರಚಾರ ಮಾಡಿ ನಂತರ ಇತಿಹಾಸದಲ್ಲಿ ಅತಿದೊಡ್ಡ ಸಾಲ ಹೆಚ್ಚಳಕ್ಕೆ ತಕ್ಷಣವೇ ಮತ ಚಲಾಯಿಸಿದ ಪ್ರತಿಯೊಬ್ಬ ಸದಸ್ಯರು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಅವರು ಹೇಳಿದರು.

ಈ ಮಸೂದೆ ಅಂಗೀಕಾರವಾದರೆ, ಅವರು ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಹುಚ್ಚುತನದ ಖರ್ಚು ಮಸೂದೆ ಅಂಗೀಕಾರವಾದರೆ, ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮೋಕ್ರಾಟ್-ರಿಪಬ್ಲಿಕನ್ ಯುನಿಪಾರ್ಟಿಗೆ ಪರ್ಯಾಯದ ಅಗತ್ಯವಿದೆ, ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ ಎಂದು ಮಸ್ಕ್ ಪೋಸ್ಟ್ ಮಾಡಿದ್ದಾರೆ.

ಸ್ಪೇಸ್‌ಎಕ್ಸ್‌ನ ರಾಕೆಟ್ ಉಡಾವಣೆಗಳು ನಾಸಾದೊಂದಿಗಿನ ಒಪ್ಪಂದಗಳಿಗೆ ಮಹತ್ವದ್ದಾಗಿದ್ದು, ಟೆಸ್ಲಾ ಇವಿ ಉತ್ಪಾದನೆಯು ಅಮೆರಿಕಾದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟ್ರಂಪ್‌ರ ಈ ಎಚ್ಚರಿಕೆಯು ಈ ಎರಡೂ ಕ್ಷೇತ್ರಗಳಲ್ಲಿ ಮಸ್ಕ್‌ರ ವ್ಯಾಪಾರಕ್ಕೆ ಗಂಭೀರ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಈ ಘಟನೆಯು ರಾಜಕೀಯ ಮತ್ತು ಉದ್ಯಮ ಕ್ಷೇತ್ರದ ನಡುವಿನ ಘರ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದನ್ನೂ ಓದಿ: ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌