ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಛಾಯೆಯೊಂದಿಗೆ ಕಾಮಿಡಿ ಮಾಯೆ!

ಬೆಂಗಳೂರು: ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವೀಗ ಮುದ್ದಾದ ರೊಮ್ಯಾಂಟಿಕ್ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಈ ಕ್ಷಣಕ್ಕೂ ಒಂದಷ್ಟು ಮಂದಿ ಇದು ಪ್ರೇಮ ಕಥೆಯೇ ಪ್ರಧಾನವಾಗಿರೋ ಸಿನಿಮಾ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಸೃಜನ್ ಮತ್ತು ನಾಯಕಿ ಹರಿಪ್ರಿಯಾ ಈ ಹಾಡುಗಳಲ್ಲಿ ಕಾಣಿಸಿಕೊಂಡಿರೋ ರೀತಿಯೇ ಅಂಥಾದ್ದಿದೆ. ಆದರೆ ಎಲ್ಲಿದ್ದೆ ಇಲ್ಲಿತನಕ ಬರೀ ಪ್ರೇಮಕಥೆಯನ್ನು ಹೊಂದಿರೋ ಚಿತ್ರವೆಂಬುದು ಅರ್ಧಸತ್ಯವಷ್ಟೇ!

ಯಾಕೆಂದರೆ, ನಿರ್ದೇಶಕ ತೇಜಸ್ವಿ ಈ ಸಿನಿಮಾವನ್ನು ಪ್ರೀತಿಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ರೂಪಿಸಿದ್ದಾರೆ. ಆದ್ದರಿಂದಲೇ ಇಲ್ಲಿ ಪ್ರೀತಿಯೂ ಸೇರಿದಂತೆ ಸಕಲ ರಸಗಳೂ ಸೇರಿಕೊಂಡಿವೆ. ಇದೆಲ್ಲದರೊಂದಿಗೆ ಸೃಜನ್ ಅವರ ಟಾಕಿಂಗ್ ಸ್ಟಾರ್ ಎಂಬ ಇಮೇಜಿಗೆ ತಕ್ಕುದಾದ ಅಂಶಗಳೂ ಈ ಸಿನಿಮಾದಲ್ಲಿರಲಿವೆ. ಎಲ್ಲಿದ್ದೆ ಇಲ್ಲಿತನಕ ಪ್ರೇಮ ಕಥೆಯಾಗಿಯೂ ಕಾಡುತ್ತದೆ. ಅದರ ಜೊತೆಗೇ ಪಕ್ಕಾ ಕಾಮಿಡಿ ಕಿಕ್ಕಿನ ಮೂಲಕ ಎಲ್ಲರನ್ನೂ ಮತ್ತೇರಿಸುವಂತೆ ಕಚಗುಳಿ ಇಡಲಿದೆ.

ಮಜಾ ಟಾಕೀಸ್ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಎಲ್ಲಿದ್ದೆ ಇಲ್ಲಿತನಕ ಚಿತ್ರಕ್ಕಾಗಿ ತಯಾರಿ ಆರಂಭವಾಗಿತ್ತು. ಮಜಾ ಟಾಕೀಸ್ ಟೀಮೆಲ್ಲ ಸೇರಿಕೊಂಡು ತೇಜಸ್ವಿಯವರ ಸಾರಥ್ಯದಲ್ಲಿ ಸೃಜಾಗೆ ಯಾವ ಕಥೆ ಸೂಕ್ತ ಎಂಬ ಬಗ್ಗೆ ತಿಂಗಳು ಗಟ್ಟಲೆ ಚರ್ಚೆಗಳು ನಡೆದಿದ್ದವು. ಅದೆಷ್ಟೋ ಕಥೆಗಳೂ ಚರ್ಚೆಯಾಗಿದ್ದವು. ಆದರೆ ಪ್ರೀತಿ, ಸಾಹಸ ಮತ್ತು ಕಾಮಿಡಿಯಂಥಾ ಒಂದೇ ಜಾನರಿನ ಚಿತ್ರಕ್ಕಿಂತಲೂ ಈ ಎಲ್ಲ ಅಂಶಗಳನ್ನು ಬೆರೆಸಿ ಒಂದು ಕಥೆ ಸೃಷ್ಟಿಸೋದೇ ಸೂಕ್ತ ಎಂಬ ನಿರ್ಧಾರಕ್ಕೆ ಇಡೀ ತಂಡ ಬಂದಿತ್ತು. ಹಾಗೆ ಸೃಷ್ಟಿಯಾಗಿದ್ದ ಎಲ್ಲಿದ್ದೆ ಇಲ್ಲಿತನಕದ ಫೈನಲ್ ಕಥೆ. ಅದು ಎಲ್ಲ ಅಂಶಗಳನ್ನೂ ಅರೆದು ತಯಾರಿಸಿದ ರಸಪಾಕದಂಥಾ ಚಿತ್ರ. ಅದರ ನಿಜವಾದ ಮಜಾ ಏನೆಂಬುದು ಈ ವಾರವೇ ಗೊತ್ತಾಗಲಿದೆ.

Comments

Leave a Reply

Your email address will not be published. Required fields are marked *