ಮಂಗಳೂರು: ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಅಂಗವಾಗಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ನೀರಬಂಡಿ ಉತ್ಸವದಲ್ಲಿ ದೇಗುಲದ ಆನೆಯು ಮಕ್ಕಳೊಡನೆ ನೀರಾಟವಾಡಿ ಸಂಭ್ರಮಿಸಿತು.
ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಠಿ ಉತ್ಸವದ ಕೊನೆಯ ಆಚರಣೆಯ ಅಂಗವಾಗಿ ನೀರಬಂಡಿ ಉತ್ಸವ ಗುರುವಾರದಂದು ನಡೆಸಲಾಯಿತು. ನೀರಬಂಡಿ ಉತ್ಸವ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯ ಆವರಣದ ಅಂಗಳದಲ್ಲಿ ನೀರು ತುಂಬಿಸಿ, ದೇವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಈ ಉತ್ಸವದಲ್ಲಿ ದೇಗುಲದ ಆನೆ ಮಕ್ಕಳೊಡನೆ ನೀರಾಟವಾಡಿದ್ದು ಎಲ್ಲರ ಗಮನ ಸೆಳೆಯಿತು.

ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಪಲ್ಲಕ್ಕಿ ಉತ್ಸವ ನೇರೆವೇರಿತು. ನಂತರ ನೀರಿನಲ್ಲಿ ನಡೆದ ಬಂಡಿ ರಥೋತ್ಸವ ಆಕರ್ಷಣೀಯವಾಗಿತ್ತು. ಅದರಲ್ಲೂ ದೇಗುಲದ ಆನೆ ಯಶಸ್ವಿ ಮಕ್ಕಳೊಂದಿಗೆ ನೀರಾಟವಾಡುತ್ತಾ ಸೊಂಡಿಲಿನಿಂದ ನೀರನ್ನು ಚಿಮ್ಮಿಸಿ ಸಂಭ್ರಮಿಸಿದೆ. ನೀರಾಟದಲ್ಲಿ ದೇಗುಲದ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದು, ನೀರಬಂಡಿ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಈ ವಿಶೇಷ ನೀರಬಂಡಿ ಉತ್ಸವದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಉತ್ಸವ ಕೊನೆಯಾಗಿದ್ದು, ಇಂದಿನಿಂದ 15 ದಿನಗಳಿಂದ ಸ್ಥಗಿತಗೊಂಡಿದ್ದ ಸರ್ಪ ಸಂಸ್ಕಾರ ಸೇವೆಗಳು ಎಂದಿನಂತೆ ದೇಗುಲದಲ್ಲಿ ನಡೆಯಲಿದೆ.
https://www.youtube.com/watch?v=I445kVV9My8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply