ಗುರುವಾರ ‘ಮಹಾಭಾರತ’ದ ಮಹಾ ತೀರ್ಪು

ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಗುರುವಾರ ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.

ಮತ ಎಣಿಕೆಗೆ ರಾಜ್ಯಗಳ ಜಿಲ್ಲಾ ಕೇಂದ್ರಗಳು ಸಜ್ಜಾಗಿವೆ. ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಮ್‍ಗಳು ಓಪನ್ ಆಗಲಿವೆ. ಮೊದಲಿಗೆ ಅಂಚೆ ಮತ ಎಣಿಕೆ ನಡೆದು ಆಮೇಲೆ ಇವಿಎಂ ಎಣಿಕೆ ಶುರುವಾಗಲಿದೆ.

ಮತ ಎಣಿಕೆಗೆ ಮುನ್ನ ವಿವಿಪ್ಯಾಟ್ ತಾಳೆ ಮಾಡಬೇಕೆಂಬ 22 ವಿಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಆದರೆ, ಸುಪ್ರೀಂ ಆದೇಶದಂತೆ ಪ್ರತಿ ಕ್ಷೇತ್ರದಲ್ಲೂ ಇವಿಎಂಗಳ ಜೊತೆ 5 ವಿವಿಪ್ಯಾಟ್‍ಗಳ ತಾಳೆ ನಡೆಯಲಿದೆ. ಇವಿಎಂ ಎಣಿಕೆಯ ಬಳಿಕ ವಿವಿಪ್ಯಾಟ್ ತಾಳೆ ಮಾಡಲಾಗುತ್ತದೆ ಎಂದು ಆಯೋಗ ಹೇಳಿದೆ.

ಯಾವುದೇ ಹಿಂಸಾಚಾರ ಆಗದಂತೆ ಎಚ್ಚರ ವಹಿಸುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. 7 ಹಂತಗಳ ಮತದಾನದಲ್ಲಿ ಈ ಬಾರಿ ಶೇ.67ರಷ್ಟು ಮತದಾನ ನಡೆದಿದೆ.

2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರೆ 150 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಈ ಬಾರಿಯ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮತ್ತೆ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿವೆ.

Comments

Leave a Reply

Your email address will not be published. Required fields are marked *