ನಮೋ ಟಿವಿ ವಿವಾದ- ಚುನಾವಣಾ ಆಯೋಗಕ್ಕೆ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಇರುವಾಗ ಬಿಡುಗಡೆಯಾದ ನಮೋ ಟಿವಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದು, ಇದೀಗ ಚುನಾವಣಾ ಆಯೋಗಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ.

ನಮೋ ಟಿವಿಗೆ ಪರವಾನಿಗೆ ಹೊಂದಿಲ್ಲ, ಅದು ಪಕ್ಷದ ಜಾಹೀರಾತುಗಳಿಗಷ್ಟೇ ಸೀಮಿತವಾದ ವಾಹಿನಿಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸ್ಪಷ್ಟನೆ ನೀಡಿದೆ.

ಐಟಿ ಉದ್ಯೋಗಿ ಹಾಗೂ ರಾಜಕೀಯ ವಿಶ್ಲೇಷಕ ಪರಾಗ್ ಶಾ ಈ ವಾಹಿನಿಯ ಮಾಲೀಕರಾಗಿದ್ದಾರೆ. ಗುಜರಾತ್‍ನಲ್ಲಿ ಮೋದಿ ಸಿಎಂ ಆಗಿದ್ದ ವೇಳೆ ಇವರು ಕಾರ್ಯನಿರ್ವಹಿಸಿದ್ದರು. ನಮೋ ಟಿವಿ ಬಿಡುಗಡೆಗೆ ವಿಪಕ್ಷಗಳು ಆಕ್ಷೇಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

ಹೀಗಾಗಿ ಚುನಾವಣಾ ಆಯೋಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. ಆಯೋಗದ ಸೂಚನೆ ಬೆನ್ನಲ್ಲೇ ನಮೋ ಟಿವಿ ಲೈಸೆನ್ಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದ್ರೆ ಪರವಾನಿಗೆ ಇಲ್ಲದ ವಾಹಿನಿಯನ್ನು ಡಿಟಿಎಚ್ ಹಾಗೂ ಕೇಬಲ್‍ನವರು ಹೇಗೆ ಪ್ರಸಾರ ಮಾಡ್ತಾರೆ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಕೇಂದ್ರ ಸರ್ಕಾರದಲ್ಲಿ ನೊಂದಾಯಿಸದ ಯಾವುದೇ ವಾಹಿನಿಯನ್ನು ಡಿಟಿಎಚ್ ಫ್ಲಾಟ್‍ಫಾರ್ಮ್ ಗೆ ತೆಗೆದುಕೊಳ್ಳಬಾರದು ಎಂದು ವೆಬ್‍ಸೈಟ್‍ನಲ್ಲಿ ಎಂಐಬಿ ಸ್ಪಷ್ಟನೆ ನೀಡಿದೆ.

ಚಾನೆಲ್ ನ ಲೋಗೋದಲ್ಲಿ ಮೋದಿ ಅವರ ಚಿತ್ರವಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ವಾರದ 24 ಗಂಟೆಯೂ ಪ್ರಸಾರ ಮಾಡುವ ಉದ್ದೇಶದಿಂದ ಬಿಜೆಪಿ, ಮಾರ್ಚ್ 31 ರಂದು `ನಮೋ ಟಿವಿ’ ಗೆ ಚಾಲನೆ ನೀಡಿತ್ತು.

Comments

Leave a Reply

Your email address will not be published. Required fields are marked *