ಪರಿಹಾರಕ್ಕಾಗಿ ಅಧಿಕಾರಿ ಮುಂದೆ ಸೆರಗು ಒಡ್ಡಿ ಅಜ್ಜಿ ಕಣ್ಣೀರು

ಬೀದರ್: ಪರಿಹಾರಕ್ಕಾಗಿ ರೈತ ಮಹಿಳೆಯೊಬ್ಬರು ಜಂಟಿ ನಿರ್ದೇಶಕನ ಮುಂದೆ ಸೆರಗು ಒಡ್ಡಿ, ಕಣ್ಣೀರು ಹಾಕಿ ಅಳಲು ತೋಡಿಕೊಂಡ ಘಟನೆ ಬೀದರಿನ ಕೃಷಿ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಇಂದು ನಡೆದಿದೆ.

ಎರಡು ವರ್ಷಗಳ ಹಿಂದೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮುಧೋಳ ಗ್ರಾಮದ ಬಾಬುರಾವ್(60) ಎಂಬ ರೈತ ವಿವಿಧ ಬ್ಯಾಂಕ್ ಗಳಲ್ಲಿ 1 ಲಕ್ಷ ಬೆಳೆ ಸಾಲ ಮಾಡಿದ್ದರು. ಈ ಸಾಲ ಮರುಪಾವತಿ ಮಾಡಲಾಗದೆ ವಿಷ ಸೇವಿಸಿ ಬಾಬುರಾವ್ ಆತ್ಮಹತ್ಯೆಗೆ ಶರಣಾಗಿದ್ದರು. ಅಂದು ಜನಪ್ರತಿನಿಧಿಗಳು ಹಾಗೂ ಕೃಷಿ ಅಧಿಕಾರಿಗಳು ಶೀಘ್ರ ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಪರಿಹಾರ ಸಿಗದಿದ್ದಕ್ಕೆ ಇಂದು ರೈತನ ಪತ್ನಿ ಸಿದ್ದಮ್ಮ, ಮೊಮ್ಮಗಳು ಹಾಗೂ ಕರವೇ ಕಾರ್ಯಕರ್ತರು ಜಂಟಿ ಕೃಷಿ ಇಲಾಖೆಯ ಮುಂಭಾಗ ಪ್ರತಿಭಟನೆ ಮಾಡಿದರು.

ಸಿದ್ದಮ್ಮ ಪ್ರತಿಭಟನೆ ಮಾಡುವಾಗ ಸ್ಥಳಕ್ಕೆ ಬಂದ ಜಂಟಿ ಕೃಷಿ ನಿರ್ದೇಶಕ ಸಿ.ವಿದ್ಯಾನಂದ್ ಮುಂದೆ ಪತಿಗೆ ಪರಿಹಾರ ನೀಡಿ ಎಂದು ಸೀರೆ ಸೆರಗು ಒಡ್ಡಿ, ಕಣ್ಣೀರು ಹಾಕಿದರು. ಸಿದ್ದಮ್ಮ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ಸಿಗದೆ ಸಿದ್ದಮ್ಮ ನೊಂದಿದ್ದಾರೆ.

Comments

Leave a Reply

Your email address will not be published. Required fields are marked *