ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಹಾಗೂ ಸಹಾಯ ಮಾಡಲು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ.

ಈ ಕುರಿತು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಅಲಿಘಢ ಹಾಗೂ ನವದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಪರ್ಕಾಧಿಕಾರಿಗಳನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.

ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿರ್ದೇಶನದ ಮೇರೆಗೆ ಸಲಹಾ ಸಮಿತಿಯು ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸಿದೆ. ಈ ಮೂಲಕ ರಾಜ್ಯದ ಹೊರಗಿರುವ ವಿದ್ಯಾರ್ಥಿಗಳು ಈದ್ ಹಬ್ಬದ ಆಚರಣೆಗೆ ತಮ್ಮ ಮನೆಗೆ ತೆರಳಲು ಸಹಾಯ ಮಾಡಲಾಗಿದೆ ಎಂದು ಸತ್ಯಪಾಲ್ ತಿಳಿಸಿದ್ದಾರೆ.

ಅಲ್ಲದೆ, ಈ ಸಂದರ್ಭದಲ್ಲಿ ಮನೆಗೆ ಹೋಗಲು ಸಾಧ್ಯವಾಗದ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನೊಂದು ಕೊಡುಗೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಈದ್ ಹಬ್ಬ ಆಚರಿಸಲು ಸಂಪರ್ಕಾಧಿಕಾರಿಗಳಿಗೆ ತಲಾ 1 ಲಕ್ಷ ರೂ.ಗಳನ್ನು ಶುಕ್ರವಾರವಷ್ಟೇ ರಾಜ್ಯಪಾಲರು ಘೋಷಿಸಿದ್ದರು.

ಇದೀಗ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಮಾತನಾಡಲು ಹಾಗೂ ಮನೆಗೆ ತೆರಳಲು ಪ್ರತಿ ಉಪ ಆಯುಕ್ತರ ಕಚೇರಿಯಲ್ಲಿ ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಒಟ್ಟು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ. ಈ ಮೂಲಕ ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *