ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ, ಅನುಭವ ಮುಖ್ಯ: ಜಮೀರ್ ಅಹ್ಮದ್

ತುಮಕೂರು: ಸಚಿವ ಸ್ಥಾನಕ್ಕೆ ಶಿಕ್ಷಣ ಮುಖ್ಯವಲ್ಲ. ಅನುಭವವೇ ಮುಖ್ಯ ಎಂದು ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಜಿಲ್ಲೆಯ ಕ್ಯಾತ್ಸಂದ್ರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್, ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಅವರ ಉದಾಹರಣೆ ನೀಡುವ ಮೂಲಕ ಅನುಭವೇ ಎಲ್ಲವನ್ನು ಕಲಿಸಿಕೊಡುತ್ತದೆ ಅಂದ್ರು.

ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಹಾಕಿಲ್ಲ. ನಾನು ಇಂಗ್ಲಿಷ್ ಶಾಲೆಯಲ್ಲಿ ಓದಿದ್ದೇನೆ. ಹಾಗಾಗಿ ಕನ್ನಡ ಓದು ಸರಿಯಾಗಿ ಬಂದಿಲ್ಲದೆ ಇಂಗಿಷ್‍ನಲ್ಲಿ ಪ್ರಮಾಣ ವಚನ ಮಾಡಿದೆ. ಇದರಿಂದ ರಾಜ್ಯದ ಜನತೆಗಿಂತ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಮಾಡಿದ್ರೆ ನನಗೆ ಗಲ್ಲು ಶಿಕ್ಷೆ ಕೊಡಲಿ ಅಥವಾ ದೇಶದ್ರೋಹಿ ಎನ್ನಲಿ ಎಂದರು.

ಮಂತ್ರಿ ಸ್ಥಾನದ ಅನುಭವ ನನಗಿಲ್ಲ. ಹೀಗಾಗಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಐತಿಹಾಸಿಕ ದಾಖಲೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರ ಮಾತು ಕೇಳ್ತಾರೆ ಎಂಬ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳೋದ್ರಲ್ಲಿ ತಪ್ಪಿಲ್ಲ. ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು. ಯಾಕಂದ್ರೆ ಅವರು ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *