ಭಾನುವಾರವೂ ಡಿಕೆಶಿಗೆ ಸಿಗಲಿಲ್ಲ ವಿಚಾರಣೆಯಿಂದ ಮುಕ್ತಿ- ಸಂಜೆ ಕುಟುಂಬಸ್ಥರ ಭೇಟಿ

-ಹಳೆ ಹೇಳಿಕೆಗೆ ಬದ್ಧವಾದ ಡಿಕೆ ಆಪ್ತ!

ನವದೆಹಲಿ: ಭಾನುವಾರ ಸಹ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಸಂಜೆ ಇಡಿ ಕಚೇರಿಯಲ್ಲಿ ಕುಟುಂಬಸ್ಥರು ಡಿಕೆಶಿಯವರನ್ನು ಭೇಟಿಯಾದರು.

ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ್ ಇಂದು ಕೂಡಾ ವಿಚಾರಣೆ ಎದುರಿಸಿದರು. ಕಳೆದ ನಾಲ್ಕು ದಿನಗಳಿಂದ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಇಡಿ ವಿಚಾರಣೆ ನಡೆಸುತ್ತಿದ್ದು ಇಂದು ರಜೆ ದಿನವಾದ ಹಿನ್ನೆಲೆ ವಿಚಾರಣೆಯಿಂದ ರಿಲೀಫ್ ಸಿಗಬಹುದು ಎಂದು ಡಿಕೆ ಶಿವಕುಮಾರ್ ನಿರೀಕ್ಷೆ ಮಾಡಿದ್ದರು. ಆದರೆ ಕನಕಪುರದ ಬಂಡೆ ನಿರೀಕ್ಷೆ ಹುಸಿಯಾಗಿದ್ದು, ಬೆಳ್ಳಂ ಬೆಳಗ್ಗೆ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಇಡಿ ಅಧಿಕಾರಿಗಳು ವಿಚಾರಣೆ ಬರುವಂತೆ ಸೂಚಿಸಿದರು. ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ಐದು ಗಂಟೆವರೆಗೂ ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದರು.

ಕಳೆದ ಎರಡು ದಿನಗಳ ಕಾಲ ಇಡಿ ಅಧಿಕಾರಿಗಳ ಮುಂದೆ ಡಿ.ಕೆ ಶಿವಕುಮಾರ್ ಆಪ್ತ ಸುನಿಲ್ ಶರ್ಮಾ ವಿಚಾರಣೆ ಹಾಜರಾಗಿದ್ದರು. ಈ ವೇಳೆ ದೆಹಲಿಯ ಸಬ್ದರ್ ಜಂಗ್ ನಿವಾಸದಲ್ಲಿ ಸಿಕ್ಕ 8.59 ಕೋಟಿ ರೂ. ನಂದೇ ಎಂದು ಒಪ್ಪಿಕೊಂಡಿದ್ದಾರಂತೆ. ಸಿಕ್ಕಿರುವ ಹಣ ವ್ಯವಹಾರಕ್ಕೆ ಸಂಬಂಧಿಸಿದ್ದು ಈಗಾಗಲೇ ಆದಾಯ ತೆರಿಗೆ ಇಲಾಖೆ ಮುಂದೆ ಈ ಹಣದ ಮೂಲ ಘೋಷಿಸಿಕೊಂಡಿದ್ದು ಎಲ್ಲ ರೀತಿಯ ಟ್ಯಾಕ್ಸ್ ಕಟ್ಟಿದೆ ಎಂದಿದ್ದಾರಂತೆ. ಅಲ್ಲದೇ ಡಿಕೆಶಿಗೂ ಈ ಹಣಕ್ಕೂ ಸಂಬಂಧ ಇಲ್ಲ ಎಂದು ಇಡಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯಿಂದಾಗಿ ಡಿಕೆ ಶಿವಕುಮಾರ್ ಗೆ ಮುಂದೆ ಪ್ರಕರಣದಿಂದ ರಿಲೀಫ್ ಸಿಗಬಹುದಾದ ಸಾಧ್ಯತೆ ಇದೆ.

ಕುಟುಂಬಸ್ಥರ ಭೇಟಿ: ಇಂದು ಸಂಜೆ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕುಟುಂಬಸ್ಥರು ಭೇಟಿಯಾದರು. ಪತ್ನಿ ಉಷಾ, ಪುತ್ರಿ ಐಶ್ವಯಾ, ಸೋದರ ಡಿ.ಕೆ.ಸುರೇಶ್ ಇಡಿ ಕಚೇರಿಗೆ ಆಗಮಿಸಿ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾದರು. ಲೋಕನಾಯಕ್ ಭವನದ ಮುಂಭಾಗದಲ್ಲಿದ್ದ ಮಾಧ್ಯಮಗಳಿಗೆ ದೃಶ್ಯಗಳನ್ನು ಸೆರೆ ಹಿಡಿಯದಂತೆ ಡಿಕೆಶಿ ಬೆಂಬಲಿಗರು ಅವಾಜ್ ಹಾಕಿದ ಘಟನೆಯೂ ನಡೆಯಿತು. ಭೇಟಿ ವೇಳೆ ಡಿಕೆಶಿಯವರನ್ನು ನೋಡಿ ಪತ್ನಿ ಮತ್ತು ಪುತ್ರಿ ಒಂದು ಕ್ಷಣ ಭಾವುಕರಾದರು ಎಂದು ತಿಳಿದು ಬಂದಿದೆ.

ಹಣ ನನ್ನದು ಎಂದು ಒಪ್ಪಿಕೊಂಡ್ರು ಸುನಿಲ್ ಶರ್ಮಾ ವಿಚಾರಣೆಯನ್ನು ಇಡಿ ಅಧಿಕಾರಿಗಳು ಮುಂದುವರಿಸಿದ್ದಾರೆ. ನೋಟ್ ಬ್ಯಾನ್ ವೇಳೆ ಈ ಪ್ರಮಾಣದ ಹಣ ಎಲ್ಲಿಂದ ಬಂತು ಅಂತಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. 500, 2000 ರೂ. ಮುಖಬೆಲೆಯ ಈ ಪ್ರಮಾಣದ ನೋಟ್ ಗಳನ್ನ ಎಲ್ಲಿಂದ ತಂದ್ರಿ ಅಂತಾ ಫುಲ್ ಡ್ರಿಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *