‘ಪುಷ್ಪ’ ಟೀಮ್ ಗೆ ED ಶಾಕ್: ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ಅಧಿಕಾರಿಗಳು ದಾಳಿ

ಲ್ಲು ಅರ್ಜುನ್ ನಟನೆಯ ‘ಪುಷ್ಪ’ (Pushpa) ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಈ ಗೆಲುವಿನ ಖುಷಿಯಲ್ಲೇ ನಿರ್ದೇಶಕ ಸುಕುಮಾರನ್ (Sukumaran) ‘ಪುಷ್ಪ 2’ ಸಿನಿಮಾವನ್ನು ಶುರು ಮಾಡಿದ್ದರು. ಈಗಾಗಲೇ ಹಲವು ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಈ ಸಮಯದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ನಿರ್ಮಾಪಕರ ಮತ್ತು ನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ (Mythri Movie Makers)ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಂಸ್ಥೆಯ ನಿರ್ಮಾಪಕರು. ಬೆಳಗಿನ ಜಾವ ಇವರ ಮನೆ ಹಾಗೂ ಕಚೇರಿಯಲ್ಲಿ ಇಡಿ (ED) ಅಧಿಕಾರಿಗಳು ಶೋಧ ಕಾರ್ಯ ಶುರು ಮಾಡಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ವರದಿ ಆಗಿದೆ. ಇದನ್ನೂ ಓದಿ:‘ಎಂದೆಂದಿಗೂ ಆರ್‌ಸಿಬಿ’ ಎಂದ ನಟಿ ದಿವ್ಯಾ ಉರುಡುಗ

ವಾಲ್ತೇರು ವೀರಯ್ಯ, ವೀರಸಿಂಹ ರೆಡ್ಡಿ ಅಂತ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದ್ದು ವಿದೇಶಗಳಲ್ಲಿ ದೊಡ್ಡಬಜೆಟ್ ನ ಚಿತ್ರಗಳನ್ನು ವಿತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಲಾ ಮಾರ್ಗದಲ್ಲಿ ಹಣದ ಸಂಗ್ರಹಣೆ ಮೂಲಕ ಪ್ರಮೋಟರ್ಸ್ ಮನಿ ಲ್ಯಾಂಡರಿಂಗ್ ಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇಷ್ಟೇ ಅಲ್ಲದೇ ಆದಾಯ ತೆರಿಗೆ (IT) ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇಡಿ ಅಧಿಕಾರಿಗಳ ಜೊತೆ ಐಟಿ ಅಧಿಕಾರಿಗಳು ಕೂಡ ಜೊತೆಯಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆಗೆ ಪುಷ್ಪ ಚಿತ್ರದ ಸುಕುಮಾರನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರಂತೆ.