ಡಿಕೆಶಿ ಅರ್ಜಿ ವಜಾಗೊಳ್ತಿದ್ದಂತೆ ಇಡಿ ಸಮನ್ಸ್ – ವಿಚಾರಣೆಗೆ ಹಾಜರಾಗದಿದ್ರೆ ಶುರುವಾಗುತ್ತೆ ಟ್ರಬಲ್

ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು,  ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶಿಸಿದೆ. ಆದರೆ ಡಿಕೆಶಿ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ.

ಮಂಗಳವಾರದ ತನಕ ವಿನಾಯಿತಿ ನೀಡುವಂತೆ ಇಡಿಗೆ ಪತ್ರ ಬರೆಯಲು ಡಿಕೆಶಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ತಮ್ಮ ವಕೀಲರ ಮೂಲಕ ಪತ್ರ ಕಳುಹಿಸಿ ಕೊಟ್ಟು ಅವರ ಬಳಿ ಮಾಹಿತಿ ಪಡೆಯಿರಿ ಎಂದು ಡಿಕೆಶಿ ಹೇಳಲಿದ್ದಾರೆ. ಅನಾರೋಗ್ಯ, ವೈಯಕ್ತಿಕ ಕಾರಣಕ್ಕೆ ಹಾಜರಾಗಲು ವಿನಾಯಿತಿ ಕೇಳಲಿರೋ ಡಿಕೆಶಿ ಇಂದು ದೆಹಲಿಗೆ ಹೋಗೋದು ಬಹುತೇಕ ಅನುಮಾನವಾಗಿದೆ. ವಕೀಲರನ್ನು ಕಳುಹಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇತ್ತ ವಿಚಾರಣೆಗೆ ಹಾಜರಾಗದಿದ್ದಲ್ಲಿ ಇಡಿ ಅಧಿಕಾರಿಗಳು ಮತ್ತೊಂದು ಸಮನ್ಸ್ ನೀಡಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಡಿಕಿಶಿ ನಿರ್ಧರಿಸಿದ್ದಾರೆ. ಅಲ್ಲದೆ ವಿಚಾರಣೆಗೆ ಹಾಜರಾಗುತ್ತೇನೆ. ಆದರೆ ಬಂಧನ ಮಾಡದಂತೆ ಆದೇಶ ಕೊಡಿ ಎಂದು ಮನವಿ ಮಾಡಿಕೊಳ್ಳಲಿದ್ದಾರೆ. ಈ ಕುರಿತು ಇಂದು ಕೋರ್ಟಿಗೆ ತುರ್ತು ವಿಚಾರಣೆಗೆ ಮನವಿ ಮಾಡಲಿದ್ದಾರೆ. ಆದರೆ ತುರ್ತು ವಿಚಾರಣೆಗೆ ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಕೆಶಿ ಮುಂದಿರುವ ಆಯ್ಕೆಗಳೇನು?
ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದು. ಐಟಿ ವಿಚಾರಣೆ ವೇಳೆ ನೀಡಿರುವ ಉತ್ತರಗಳಿಗೆ ಹೊಂದಾಣಿಕೆಯಾಗುವಂತೆ ಉತ್ತರಿಸುವುದು. ಐಟಿ ದಾಳಿ ವೇಳೆ ಪತ್ತೆಯಾಗಿರುವ ಹಣಕ್ಕೆ ಸೂಕ್ತ ದಾಖಲಾತಿ ನೀಡುವುದು. ಅಥವಾ ದಾಖಲಾತಿ ನೀಡಲು ಕಾಲಾವಕಾಶ ಕೋರಬಹುದು. ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.

ಇಡಿ ಅಧಿಕಾರಿಗಳು ಏನ್ಮಾಡಬಹುದು?
ಅವಶ್ಯವಿದ್ದರೆ ವಿಚಾರಣೆ ವೇಳೆಯೇ ಡಿಕೆಶಿ ಅವರನ್ನು ವಶಕ್ಕೆ ಪಡೆಯಬಹುದು. ಸೂಕ್ತ ಸಾಕ್ಷ್ಯಾಧಾರ ಕಲೆಹಾಕಿದ್ದಲ್ಲಿ ಕೋರ್ಟ್ ಗಮನಕ್ಕೆ ತರುವುದು. ಕೋರ್ಟ್ ಅನುಮತಿ ಮೇರೆಗೆ ಇಡಿ ಅಧಿಕಾರಿಗಳು ಡಿಕೆಶಿಯವರನ್ನು ಬಂಧಿಸಬಹುದು.

ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

Comments

Leave a Reply

Your email address will not be published. Required fields are marked *