ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

ಇಂದಿನ ಫ್ಯಾಷನ್ ಯುಗದಲ್ಲಿ ಮಹಿಳೆಯರು ಹೆಚ್ಚಾಗಿ ಸೌಂದರ್ಯದ ಕಾಳಜಿಗಾಗಿ ತಲೆಕೆಡಿಸಿಕೊಳ್ಳುತ್ತಾರೆ. ಇಂದು ತರಾವರಿ ಸೌಂದರ್ಯ ವರ್ಧಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಅವುಗಳು ನೈಸರ್ಗಿಕ ಸೌಂದರ್ಯವರ್ಧಕದ ರಾಣಿಯೆಂದೇ ಕರೆಯುವ ‘ಅರಿಶಿನ’ದ ಜೊತೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಚಲನಚಿತ್ರ ನಟಿಯರೂ ಸೇರಿದಂತೆ ಫ್ಯಾಷನ್ ಪ್ರಿಯ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಮತ್ತು ದೈಹಿಕ ಅರೋಗ್ಯವನ್ನು ಹೆಚ್ಚಿಸಿಕೊಳ್ಳಲು ಅರಿಶಿನ ಉತ್ಪನ್ನವನ್ನು ಬಳಕೆ ಮಾಡುತ್ತಾರೆ.

ಅರಿಶಿನ ಕೇವಲ ತ್ವಚೆಯನ್ನು ಪೋಷಿಸುವುದಲ್ಲದೇ ಕಣ್ಣುಗಳ ಆರೋಗ್ಯದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನಲ್ಲಿ ಧೂಳು ಸೇರಿಕೊಂಡು ಕಣ್ಣು ಉರಿ ಮತ್ತು ಕಣ್ಣು ಕೆಂಪಗಾಗಿದ್ದರೆ, ಒಂದು ಲೋಟ ನೀರಿಗೆ ಚಿಟಿಕೆ ಅರಿಶಿನ ಬೆರೆಸಿ 10 ನಿಮಿಷ ಪಕ್ಕಕ್ಕಿಡಿ. ಅರಿಶಿನ ಲೋಟದ ತಳಭಾಗದಲ್ಲಿ ಉಳಿದುಕೊಂಡು ನೀರು ತಿಳಿಯಾಗುತ್ತದೆ. ಈ ತಿಳಿನೀರನ್ನು ಕಣ್ಣಿಗೆ 2 ಹನಿ ಹಾಕುವುದರಿಂದ ಅಥವಾ ಈ ನೀರಿನಿಂದ ಕಣ್ಣುಗಳನ್ನೂ ತೊಳೆದುಕೊಳ್ಳುವುದರಿಂದ ಕಣ್ಣು ಉರಿ ಮತ್ತು ಕೆಂಪಗಾಗುವುದು ಕಡಿಮೆಯಾಗುತ್ತದೆ.

ಅರಿಶಿನದಲ್ಲಿರುವ ಆರೋಗ್ಯವರ್ಧಕ ಅಂಶಗಳೇನು?
1. ಅರಿಶಿನವು ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿರೋಧಕ ಲಕ್ಷಣವನ್ನು ಹೊಂದಿದೆ.
2. ಅರಿಶಿನವು ಆಂಟಿಸೆಪ್ಟಿಕ್ ಆಗಿರುವುದರಿಂದ ಗಾಯಗಳನ್ನು ಅತೀ ಬೇಗ ವಾಸಿಮಾಡುತ್ತದೆ.
3. ಅರಶಿನ ಎಲ್ಲಾ ಕಾಲದಲ್ಲಿಯೂ ಎಲ್ಲಾ ತರಹದ ಚರ್ಮಕ್ಕೂ ಹೊಂದಿಕೆಯಾಗಿ ತ್ವಚೆಯನ್ನು ರಕ್ಷಿಸುವ ಅಂಶವನ್ನು ಹೊಂದಿದೆ.
4. ಮುಖದಲ್ಲಿನ ಮೊಡವೆ ಮತ್ತು ಇತರೆ ಚರ್ಮ ಸಮಸ್ಯೆಗಳಿಗೂ ರಾಮಬಾಣ.


5. ಮಹಿಳೆಯರಿಗೆ ಫೇಸ್‍ಪ್ಯಾಕ್ ಮತ್ತು ಬಾಡಿ ಸ್ಕ್ರಬರ್ ಗಳಲ್ಲಿ ಮುಖ್ಯ ಪದಾರ್ಥವಾಗಿದೆ.
6. ಅರಿಶಿನದೊಂದಿಗೆ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಗುಳ್ಳೆ ನಿವಾರಣೆಯಾಗಿ ಮುಖಕ್ಕೆ ಹೊಳಪು ತಂದುಕೊಂಡುತ್ತದೆ.
7. ಹಾಲಿನೊಂದಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ಕೆಮ್ಮು, ಕಫ ನಿವಾರಣೆಯಾಗುತ್ತದೆ.
8. ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್ ಸೊಂಕು ನಿವಾರಣೆಯಾಗುತ್ತದೆ.
9. ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
10. ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.
11. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅರಿಶಿನ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಿಬ್ಬೊಟ್ಟೆ ನೋವನ್ನು ಶಮನಗೊಳಿಸುತ್ತದೆ.

ಹೀಗೆ ಹಲವಾರು ವೈದ್ಯಕೀಯ ಗುಣಗಳನ್ನು ಒಳಗೊಂಡಿರುವ ಅರಿಶಿನ ದಿನನಿತ್ಯ ಬಳಕೆಯ ಪ್ರಮುಖ ಪದಾರ್ಥ. ದೇವರ ಪೂಜೆಯಿಂದ ಹಿಡಿದು ಶುಭ ಕಾರ್ಯಗಳು, ಅಡುಗೆ ಮತ್ತು ಸೌಂದರ್ಯದವರೆಗೂ ಅರಿಶಿನ ಬಳಕೆ ಮಾಡದೇ ಇರುವವರೂ ಯಾರು ಇಲ್ಲ. ಬಹಳ ಹಿಂದಿನ ಕಾಲದಿಂದಲೂ ಅರಿಶಿನಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು, ‘ಆರೋಗ್ಯಕ್ಕೆ ಅರಿಶಿನ ಮದ್ದು’ ಎಂಬ ಶಿಫಾರಸ್ಸುಗಳು ಇಂದಿನ ಕಾಲದವರೆಗೂ ಉಪಯೋಗದಲ್ಲಿದೆ. ಎಲ್ಲಾದರೂ ಬಿದ್ದು ಗಾಯ ಮಾಡಿಕೊಂಡು ಬಂದ ಮಗುವಿಗೆ ಅಮ್ಮ ಮೊದಲು ಅರಿಶಿನ ಹಚ್ಚು ಎನ್ನುತ್ತಾಳೆ. ಅಂತಹ ಪುಟ್ಟ ಗಾಯಗಳಿಂದ ದೊಡ್ಡ ಕ್ಯಾನ್ಸರ್ ಕಾಯಿಲೆಗಳನ್ನು ನಿವಾರಿಸುವಲ್ಲಿ ಅರಿಶಿನ ಪರಿಣಾಮಕಾರಿ ಮದ್ದು. ದಿನನಿತ್ಯದ ಆಹಾರದಲ್ಲಿಯೂ ಅರಿಶಿನ ಬಳಸುತ್ತಾ ಬಂದರೆ ನಮ್ಮ ಜ್ಞಾಪಕ ಶಕ್ತಿಕೂಡ ಹೆಚ್ಚಾಗುತ್ತದೆ.

ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ಹೃದಯದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.

Comments

Leave a Reply

Your email address will not be published. Required fields are marked *