ಮುದ್ದೆ ಉಂಡು ನಿದ್ದೆ ಮಾಡಿ, ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ: ವಿಶ್ವನಾಥ್‍ಗೆ ನಂಜಯ್ಯನಮಠ ಟಾಂಗ್

ಬಾಗಲಕೋಟೆ: ಹೊಟ್ಟೆ ತುಂಬಾ ಮುದ್ದೆ ಉಂಡು, ನಿದ್ದೆ ಮಾಡ್ಕೊಂಡಿರಿ. ಹೊಸ ಪಕ್ಷ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರಿಗೆ ಕಾಂಗ್ರೆಸ್ ನಾಯಕ ಎಸ್.ಜಿ.ನಂಜಯ್ಯನಮಠ ಟಾಂಗ್ ಕೊಟ್ಟಿದ್ದಾರೆ.

ಅನರ್ಹ ಶಾಸಕರು ಸೇರಿ ಹೊಸ ಪಕ್ಷ ಕಟ್ಟುವುದಾಗಿ ವಿಶ್ವನಾಥ್ ಅವರು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಂಜಯ್ಯನಮಠ ಅವರು ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಕಾಲು, ಆರೋಗ್ಯ ಸರಿಯಿಲ್ಲ. ಹೊಸ ಪಕ್ಷ ಕಟ್ಟುವ ದುಸ್ಸಾಹಸ ಮಾಡಬೇಡಿ. ಕಾಂಗ್ರೆಸ್ಸಿನಲ್ಲಿ ಬೆಳೆದಿರಿ, ಜೆಡಿಎಸ್‍ನಲ್ಲಿ ಪುನರ್ಜನ್ಮ ಪಡೆದಿರಿ. ಕೊನೆಗೆ ಜೆಡಿಎಸ್‍ನ ಜೀವವನ್ನೇ ತೆಗೆದುಕೊಂಡಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ನಿಮಗೆ ಮಂಗಳಾರತಿ ಮಾಡಲು ಮತದಾರರು ಸಿದ್ದರಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

ಹೊಸ ಪಕ್ಷವನ್ನು ಕಟ್ಟಿ, ಇದ್ದದ್ದನ್ನು ಕಳೆದುಕೊಂಡವರ ಇತಿಹಾಸ ನೋಡಿಲ್ಲವೆ? ದೇವರಾಜ ಅರಸು, ಬಂಗಾರಪ್ಪನವರು, ಆರ್. ಗುಂಡೂರಾಯರು, ಯಡಿಯೂರಪ್ಪ, ಬಿ. ಶ್ರೀರಾಮಲು ಅವರ ಪರಿಸ್ಥಿತಿ ಏನಾಯಿತು ಎನ್ನುವುದನ್ನ ಅರ್ಥ ಮಾಡಿಕೊಳ್ಳಿ. ನೀವು ಬುದ್ಧಿವಂತರಿದ್ದೀರಿ, ಹೆಚ್ಚಿಗೆ ಓದಿರಿ, ಹೆಚ್ಚಿಗೆ ಬರೆಯಿರಿ, ಹೊಟ್ಟೆ ತುಂಬ ಮುದ್ದೆ ಉಂಡು, ಕಣ್ಣು ತುಂಬ ನಿದ್ದೆ ಮಾಡಿ ಎಂದು ಹಳೆಯ ಸ್ನೇಹಿತನಿಗೆ ಸಲಹೆ ರೂಪದಲ್ಲಿ ನಂಜಯ್ಯನಮಠ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *