ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಭೂಕಂಪ – ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿದ ಜನ

ನವದೆಹಲಿ: ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಇಂದು (ಫೆ.17) ಮುಂಜಾನೆ 5:36ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 5 ಕಿಲೋಮೀಟ‌ರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರಬಿಂದು ದೌಲಾ ಕುವಾನ್‌ನಲ್ಲಿರುವ ದುರ್ಗಾಬಾಯಿ ದೇಶಮುಖ್ ಮಹಾವಿದ್ಯಾಲಯದ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದಿಂದ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ಹಲವಾರು ಬಹುಮಹಡಿ ಕಟ್ಟಡಗಳ ನಿವಾಸಿಗಳು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಗಾಜಿಯಾಬಾದ್‌ನ ನಿವಾಸಿಯೊಬ್ಬರು ಈ ರೀತಿಯ ಅನುಭವವನ್ನು ನನ್ನ ಜೀವಮಾನದಲ್ಲಿ ಅನುಭವಿಸಿರಲಿಲ್ಲ ಎಂದು ಆತಂಕದಿಂದ ನುಡಿದಿದ್ದಾರೆ.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ರೈಲು ಅಪಘಾತಕ್ಕೀಡಾಗಿದಂತೆ ಅಥವಾ ಸೇತುವೆ ಕುಸಿದಂತೆ ಭಾಸವಾಯಿತು. ಹಲವು ಪ್ರಯಾಣಿಕರು ನಿಲ್ದಾಣದಲ್ಲಿರುವ ರೂಮ್‌ ಒಂದರಲ್ಲಿದ್ದರು ಈ ವೇಳೆ, ಎಲ್ಲರೂ ಅಲ್ಲಿಂದ ಹೊರಗೆ ಓಡಿದರು ಎಂದಿದ್ದಾರೆ.

ನವದೆಹಲಿ ರೈಲು ನಿಲ್ದಾಣದ ಟಿಕೆಟ್‌ ಕೌಂಟರ್‌ನ ಸಿಬ್ಬಂದಿ ಈ ಬಗ್ಗೆ ಮಾತನಾಡಿ, ಪಾವತಿ ಕೌಂಟರ್ ಅಲುಗಾಡಲು ಪ್ರಾರಂಭಿಸಿತು, ಸುತ್ತಮುತ್ತಲಿನ ಎಲ್ಲರೂ ಕಿರುಚುತ್ತಿದ್ದರು ಎಂದು ಹೇಳಿದ್ದಾರೆ.