ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡ್ತಾರೆ: ಬಿಕೆ ಹರಿಪ್ರಸಾದ್‌

– ಆರ್‌ಎಸ್‌ಎಸ್‌ ಟೀಕಿಸುವ ಭರದಲ್ಲಿ ವಿವಾದಾತ್ಮಕ ಮಾತು

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಟೀಕಿಸುವ ಭರದಲ್ಲಿ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಹಿಂದೂ ಧರ್ಮದ ಆಚರಣೆ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ (Ganesh Chaturthi) ಡಿಜೆ ಹಾಕಿಕೊಂಡು, ಎಣ್ಣೆ ಹಾಕಿಕೊಳ್ಳುತ್ತಾರೆ. ಎಣ್ಣೆ ಹಾಕಿಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಸೀದಿ, ಚರ್ಚ್‌ ಮುಂದೆ ಮಾಡುವ ಇದು ಯಾವ ಸಾಂಸ್ಕೃತಿಕ ಚಟುವಟಿಕೆ? ಇವರು ಮಾಡಲು ಹೊರಟಿರುವುದೇನು?, ಇದು ಯಾವ ದೇಶಭಕ್ತಿ? ದೇಶಭಕ್ತಿ ಎಂದರೆ ಏನು? ತ್ರಿವರ್ಣ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಕೊಡಬೇಕು. ಆದರೆ ಆರ್‌ಎಸ್‌ಎಸ್‌ ಯಾವತ್ತು ಗೌರವ ನೀಡಿಲ್ಲ ಎಂದು ದೂರಿದರು.

 

ಆರ್‌ಎಸ್‌ಎಸ್‌ನವರು ದೊಣ್ಣೆ ಹಿಡಿದು ಪಂಥಸಂಚಲನ ಯಾಕೆ ಮಾಡಬೇಕು? ದೊಣ್ಣೆ ಹಿಡಿಯದೇ ಪಂಥಸಂಚಲನ ಮಾಡಲಿ. ಬೇಡ ಎಂದು ಹೇಳಿದವರು ಯಾರು? ಆರ್‌ಎಸ್‌ಎಸ್‌ ನೋಂದಣಿಯಾಗಿರುವ ಸಂಸ್ಥೆಯಲ್ಲ. ಪಥಸಂಚಲನದಲ್ಲಿ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಪ್ರತಿಬಾರಿ ಆರ್‌ಎಸ್‌ಎಸ್ ಬ್ಯಾನ್ ಆದಾಗಲೂ ಕ್ಷಮೆ ಕೋರಿ ಬ್ಯಾನ್ ತೆಗೆಸಿಕೊಂಡಿದ್ದಾರೆ. ನೋಂದಣಿಯಾಗದೇ ಇದ್ದರೂ ಇವರಿಗೆ ಹಣ ಎಲ್ಲಿಂದ ಬಂತು. ಗುರು ದಕ್ಷಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಡೆಯುತ್ತಿದ್ದಾರೆ. ಕಪ್ಪು ಹಣ ಇಲ್ಲೇ ಇದೆ, ಈ ಹಣ ಏನಕ್ಕೆ ಬಳಕೆಯಾಗುತ್ತಿದೆ. ನೂರು ಕೋಟಿ ರೂ. ಮೌಲ್ಯದ ಆರ್‌ಎಸ್‌ಎಸ್ ಕಚೇರಿ ನಿರ್ಮಿಸಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು.

ಸೇವಾದಳ ದೊಣ್ಣೆ ಹಿಡಿದು ಪಂಥಸಂಚಲನ ಮಾಡುತ್ತಾ? ಸೇವಾದಳ ತಪ್ಪು ಮಾಡಿದರೆ ಕಾಂಗ್ರೆಸ್ ಹೊಣೆ. ಆರ್‌ಎಸ್‌ಎಸ್ ತಪ್ಪು ಮಾಡಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.