ಯಾಕೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ: ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದುನಿಯಾ ವಿಜಿ ಆಕ್ರೋಶ

ಬೆಂಗಳೂರು: ಮಾಸ್ತಿಗುಡಿ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿರುವ `ಮಾಸ್ತಿಗುಡಿ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಥಿಯೇಟರ್‍ಗಳಲ್ಲಿ ಸ್ಕ್ರೀನ್‍ಗಳ ಕೊರತೆ ಉಂಟಾಗಿದೆ.

ಹೌದು, ಬಾಹುಬಲಿ-2 ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾಸ್ತಿಗುಡಿ ಚಿತ್ರಕ್ಕೆ ಪ್ರದರ್ಶನದ ಅವಕಾಶದ ತೊಂದರೆಯಾಗುತ್ತಿದೆ. ಹೀಗಾಗಿ ಮಾಸ್ತಿಗುಡಿ ಚಿತ್ರದ ನಿರ್ದೇಶಕ ನಾಗಶೇಖರ್, ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಾಸ್ತಿಗುಡಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡದೇ ಬಾಹುಬಲಿ-2 ಚಿತ್ರ ಪ್ರದರ್ಶನವನ್ನು ಮುಂದುವರೆಸುತ್ತಿರುವ ಥಿಯೇಟರ್‍ಗಳ ಮುಂದೆ ಗಲಾಟೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ದುನಿಯಾ ವಿಜಿ ಆಕ್ರೋಶ: ಇದು ಕೇವಲ ಮಾಸ್ತಿಗುಡಿ ಚಿತ್ರಕ್ಕೆ ಮಾತ್ರವಲ್ಲ ಕನ್ನಡ ಚಿತ್ರರಂಗಕ್ಕೆ ಆಗಿರುವ ಅನ್ಯಾಯ. ನಮ್ಮನ್ನ ನಂಬಿ ನಿರ್ಮಾಪರು, ವಿತರಕರು ಹಣ ಸುರಿದಿರುತ್ತಾರೆ. ಅವರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಮ್ಮ ಹೋರಾಟದಿಂದ ಮುಂದೆ ಬರುವ ಕನ್ನಡ ಸಿನಿಮಾಗಳಿಗೆ ಅನೂಕುಲವಾಗಬೇಕು. ಈ ಕಾರಣಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲು ನಾವುಗಳು ನಿರ್ಧರಿಸಿದ್ದೇವೆ. ಅದು ಹೇಗೆ ನಮಗೆ ಥಿಯೇಟರ್ ಕೊಡಲ್ಲ ನಾವು ನೋಡ್ತಿವಿ ಎಂದು ನಟ ದುನಿಯಾ ವಿಜಿ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದ ವಿತರಣಾ ಹಕ್ಕನ್ನ ಜಾಕ್ ಮಂಜುರವರು 10.80 ಕೋಟಿ ರೂ.ಗೆ ಖರೀದಿಸಿದ್ದಾರೆ. ಸಿನಿಮಾವನ್ನು 350 ಥಿಯೇಟರ್‍ಗಳಲ್ಲಿ ಸಿನಿಮಾವನ್ನ ರಿಲೀಸ್ ಮಾಡಲು ಯೋಚಿಸಿದ್ದಾರೆ. ಆದರೆ ಸದ್ಯ 50 ರಿಂದ 60 ಚಿತ್ರಮಂದಿರಗಳ ಸಮಸ್ಯೆ ಉಂಟಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಮಾಸ್ತಿಗುಡಿಗೆ ಪ್ರೈಮ್ ಟೈಮ್ ಸಿಗುತ್ತಿಲ್ಲ ಎಂದು ಚಿತ್ರ ತಂಡ ಆರೋಪಿಸಿದೆ. ಬಾಹುಬಲಿ-2 ಚಿತ್ರ ಬಿಡುಗಡೆ ವೇಳೆಯಲ್ಲಿ ಕನ್ನಡದ `ರಾಗಾ’ ಸಿನಿಮಾಗೆ ಅನ್ಯಾಯವಾಗಿತ್ತು.

ಚಿತ್ರವು ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಚಿತ್ರದಲ್ಲಿ ದುನಿಯಾ ವಿಜಯ್, ಅಮೂಲ್ಯ, ಕೃತಿ ಕರಬಂಧ, ಉದಯ್ ಹಾಗು ಅನಿಲ್ ಮುಂತಾದ ದೊಡ್ಡ ತಾರಾಗಣವನ್ನು ಹೊಂದಿದೆ. ಹಾಡುಗಳಿಗೆ ಸಾಧು ಕೋಕಿಲಾರವರ ಸಂಗೀತ ಸಂಯೋಜನೆಯಿದೆ.

https://youtu.be/LDet4NyN2eA

 

Comments

Leave a Reply

Your email address will not be published. Required fields are marked *