ಅಮ್ಮನ ಮಡಿಲು ಸೇರಿದ ವಿಜಿ ಪುತ್ರಿ ಮೋನಿಕಾ

ಬೆಂಗಳೂರು: ಕಳೆದ 8 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟ ಎದುರಾಗಿದ್ದು, ಮೊದಲ ಪತ್ನಿಯ ಪುತ್ರಿ ಸದ್ಯ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದ್ದಾರೆ. ಇಂದು ಬೆಳಗ್ಗೆ ದುನಿಯಾ ವಿಜಯ್‍ರ ಪುತ್ರಿ ಮೋನಿಕಾ ಬ್ಯಾಗ್ ಸಮೇತ ತಂದೆ ಮನೆಯಿಂದ ಹೊರ ಬಂದಿದ್ದು, ಅಮ್ಮ ಮನೆಗೆ ತೆರಳಿದ್ದಾರೆ.

ಜೈಲಿನಿಂದ ಬೇಲ್ ಪಡೆದು ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ತೆರಳಿದ್ದಾರೆ. ಇನ್ನುಳಿದಂತೆ ಕಳೆದ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿದ್ದರು.

ನನ್ನ ಮೊದಲ ಪತ್ನಿಗೆ ಪತಿಯಾಗಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನ ನೀಡಿದ್ದೇನೆ. ಇಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನನ್ನ ತಂದೆ ತಾಯಿಗೆ ಅನ್ಯಾಯ ಮಾಡಿದ್ದರಿಂದ ನಾನು ಆಕೆಯ ಮೇಲೆ ಆರೋಪ ಮಾಡಿದ್ದೆ. ಆದರೆ ಆ ವೇಳೆಯೂ ನನ್ನ ವಿರುದ್ಧ ಕೆಟ್ಟ ಪ್ರಚಾರ ಮಾಡಲಾಗಿತ್ತು. ನಾಗರತ್ನ ಹಾಗೂ ನನ್ನ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನನ್ನ ಮೊದಲ ಪತ್ನಿಗೆ ಮನೆ ಕೂಡ ನೀಡಿದ್ದು, ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಈ ಕುರಿತು ವಕೀಲರ ಮೂಲಕವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *