ಕಾರವಾರ: ನಾನು ಚುನಾವಣೆಯಲ್ಲಿ ಸೋಲಲು ಶನಿದೋಷ ಕಾರಣ. ಈ ದೋಷವನ್ನು ಪರಿಹಾರ ಮಾಡಿಕೊಳ್ಳಲು 50 ಲಕ್ಷ ರೂ. ಮೌಲ್ಯದ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ಅವರ ವಿರುದ್ಧ 4,79,649 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ಶನಿದೋಷವೇ ಕಾರಣ ಇದರ ಪರಿಹಾರಕ್ಕೆ ಕಾಶ್ಮೀರದಿಂದ 50 ಲಕ್ಷ ಹಣ ನೀಡಿ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಹೇಳಿದ್ದಾರೆ.

ಕಾಶ್ಮೀರದಿಂದ 50 ಲಕ್ಷ ಹಣ ಕೊಟ್ಟು ಅಪರೂಪದ ನೀಲಮಣಿ ಹರಳನ್ನು ತರಿಸಿ ಎಡಗೈನ ಮಧ್ಯ ಬೆರಳಿಗೆ ಹಾಕಿಕೊಂಡಿದ್ದೇನೆ. ಈ ಹರಳನ್ನು ವಾರದಲ್ಲಿ ಒಂದು ಬಾರಿ ದೇವರ ಬಳಿ ಇಟ್ಟು ಹಾಲಿನಲ್ಲಿ ಅಭಿಷೇಕ ಮಾಡಿ ಧರಿಸುತ್ತೇನೆ ಎಂದು ಅನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕೈ ಬೆರಳಿನಲ್ಲಿ ಇರುವ ಎಲ್ಲಾ ಉಂಗುರವನ್ನು ತೆಗೆದು ಲಕ್ಷ ಲಕ್ಷ ಖರ್ಚು ಮಾಡಿ ತಂದ ವಿಶೇಷ ಹರಳಿನ ಉಂಗುರವನ್ನು ಮಾತ್ರ ಧರಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

ಚುನಾವಣೆ ಸೋತರೆ ರಾಜಕಾರಣಿಗಳು ದೇವರು, ಜ್ಯೋತಿಷ್ಯರ ಮೊರೆ ಹೋಗುವುದು ಸಾಮಾನ್ಯ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಕೂಡ ಗುರುಗಳ ಮೊರೆ ಹೋಗಿದ್ದು ತಮ್ಮ ಯಶಸ್ಸಿಗಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದರು. ಇನ್ನು ರಾಜ್ಯದಲ್ಲೂ ಕೂಡ ರೇವಣ್ಣನವರಿಂದ ಹಿಡಿದು ಹಲವಾರು ರಾಜಕಾರಣಿಗಳು ತಮ್ಮ ಸಂಕಷ್ಟ, ದೋಷ ನಿವಾರಣೆಗೆ ಲಕ್ಷ ಲಕ್ಷ ಖರ್ಚು ಮಾಡಿ ಟೆಂಪಲ್ ರನ್ ಮಾಡಿದ್ದರು.

Leave a Reply