ಜೂಜಾಟಕ್ಕೆ ಹಣ ಕೊಡದ ಪತ್ನಿಯ ತಲೆ ಒಡೆದು ಹತ್ಯೆ – ಆರೋಪಿ ಅರೆಸ್ಟ್

ರಾಯಚೂರು: ಜೂಜಾಡಲು ಹಾಗೂ ಕುಡಿತಕ್ಕೆ ಹಣ ನೀಡದ ಪತ್ನಿಗೆ (Wife) ಸಲಾಕೆಯಿಂದ ಹೊಡೆದು ಹತ್ಯೆಗೈದ ಘಟನೆ ಲಿಂಗಸುಗೂರಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಸುನಿತಾ (28) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಆರೋಪಿ ಬಸವರಾಜನನ್ನು ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿ ಮದ್ಯ ವ್ಯಸನಿಯಾಗಿದ್ದು, ಊರ ಜಾತ್ರೆಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸೋತು ಬೈಕ್ ಹಾಗೂ ಮೊಬೈಲ್ ಒತ್ತೆಯಿಟ್ಟಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

ಪತ್ನಿಗೆ ಆಕೆಯ ತವರು ಮನೆಯವರು ನೀಡಿದ್ದ 6 ಲಕ್ಷ ರೂ. ಹಣವನ್ನ ಕೊಡುವಂತೆ ಆಗಾಗ ಹಲ್ಲೆ ನಡೆಸುತ್ತಿದ್ದ. ಇದೇ ರೀತಿ ಹಣಕ್ಕಾಗಿ ಗಲಾಟೆ ಆರಂಭಿಸಿ ಶೇಂಗಾ ಬೆಳೆಗೆ ನೀರು ಕಟ್ಟುವ ವೇಳೆ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆರೋಪಿ, 2014 ರಲ್ಲಿ ಸುನಿತಾಳನ್ನ ಪ್ರೀತಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ. ಆರಂಭದಲ್ಲಿ ಪತ್ನಿಯ ಜೊತೆಗೆ ಚೆನ್ನಾಗಿಯೇ ಇದ್ದ. ಕೆಲ ವರ್ಷಗಳ ಬಳಿಕ ಕುಡಿತದ ಚಟಕ್ಕೆ ದಾಸನಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಬಸವರಾಜನನ್ನು ಬಂಧಿಸಲಾಗಿದೆ. ಕೊಲೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಆತನ ತಂದೆ, ತಾಯಿ, ಅಣ್ಣ ಸೇರಿ ನಾಲ್ಕು ಜನರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸಿನಿಮೀಯ ರೀತಿಯಲ್ಲಿ ಗುಂಡಿನ ಚಕಮಕಿ- ಇಬ್ಬರು ಶಾರ್ಪ್ ಶೂಟರ್‌ಗಳ ಬಂಧನ