ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್‍ಡೌನ್ ಆಗಿದೆ. ಒಂದೆಡೆ ಜನ ಸಾಮಾನ್ಯರು ದಿನ ಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಮದ್ಯ ಸಿಗದೇ ಕುಡುಕರ ಕಷ್ಟ ತಾರಕ್ಕಕ್ಕೇರಿದೆ.
ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸ್ಥಗಿತಗೊಂಡಿರುವ ಕಾರಣಕ್ಕೆ ಸದ್ಯ ರಾಜ್ಯದಲ್ಲಿ ಕುಡುಕರಿಗೆ ಎಣ್ಣೆ ಸಿಗದೆ ಹುಚ್ಚರಂತಾಗಿದ್ದಾರಂತೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ವಿ. ಮಂಜುನಾಥ್ ಎಂಬಾತ ಪತ್ರ ಬರೆದಿದ್ದಾನೆ. ಸದ್ಯ ಸರ್ಕಾರದ ತೀರ್ಮಾನದಿಂದ ಮದ್ಯ ಪ್ರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಯವಿಟ್ಟು ಮದ್ಯದಂಗಡಿ ತೆರೆಯಿರಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಮದ್ಯ ಖರೀದಿ ಮಾಡ್ತೇವೆ ಎಂದು ಕುಡುಕ ಗೋಗರೆದಿದ್ದಾನೆ.

ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಮೂರು ಮುಕ್ಕಾಲು ಕೋಟಿ ಜನರು ಮದ್ಯ ಪ್ರಿಯರಿದ್ದಾರೆ. ಬೆಳಗ್ಗೆ 9ರಿಂದ 12ರವರೆಗೆ ಎಂಎಸ್‍ಐಎಲ್ ಹೋಲ್‍ಸೇಲ್ ಮದ್ಯದ ಅಂಗಡಿ ಓಪನ್ ಮಾಡಿ ಖರೀದಿಗೆ ಅವಕಾಶ ಕೊಡಬೇಕು. ನಾವು 6 ಅಡಿ ದೂರದಲ್ಲಿ ನಿಂತು ಎಣ್ಣೆ ಖರೀದಿ ಮಾಡ್ತೀವಿ. ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರಿಗೆ ದಯವಿಟ್ಟು ನಮ್ಮ ಮನವಿಗೆ ಸಹಕರಿಸಬೇಕು ಎಂದು ವಾಟ್ಸಪ್ ನಲ್ಲಿ ಪತ್ರ ಬರೆದು ಕುಡುಕ ಕೋರಿಕೊಂಡಿದ್ದಾನೆ.

Leave a Reply