35 ಕಿ.ಮೀ ದೂರದ ಆಸ್ಪತ್ರೆಗೆ 15 ನಿಮಿಷದಲ್ಲಿ ರಕ್ತ ರವಾನೆ ಮಾಡಿದ ಡ್ರೋನ್

ನವದೆಹಲಿ: ಈಗ ಎಲ್ಲಿ ನೋಡಿದರೂ ಡ್ರೋನ್‌ಗಳದ್ದೇ (Drone) ಹವಾ. ಫೋಟೋ ಕ್ಲಿಕ್ಕಿಸುವುದರಿಂದ ಹಿಡಿದು ವಸ್ತುಗಳನ್ನು ಇನ್ನೊಬ್ಬರಿಗೆ ತಲುಪಿಸುವವರೆಗೂ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೂ ಡ್ರೋನ್‌ಗಳು ಕಾಲಿಟ್ಟು ವರ್ಷವೇ ಕಳೆದಿದೆ. ಇದೀಗ ಡ್ರೋನ್ ಮೂಲಕ ರಕ್ತ (Blood) ರವಾನೆ ಮಾಡುವ ಪ್ರಾಯೋಗಿಕ ಪರೀಕ್ಷೆಯೂ ಯಶಸ್ಸು ಕಂಡಿದೆ.

ಗುರುವಾರ ದೆಹಲಿಯಲ್ಲಿ ‘ಐ ಡ್ರೋನ್’ (i-Drone)ಮೂಲಕ ರಕ್ತ ರವಾನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಈ ಹಿಂದೆ ಐ ಡ್ರೋನ್ ಮೂಲಕ ದೂರದ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ರವಾನಿಸಲಾಗಿತ್ತು. ಇದೀಗ ರಕ್ತವನ್ನು ಸಾಗಿಸಿರುವ ಡ್ರೋನ್ ಸುಮಾರು 35 ಕಿ.ಮೀ ದೂರದ ಆಸ್ಪತ್ರೆಯನ್ನು ಕೇವಲ 15 ನಿಮಿಷಗಳಲ್ಲಿ ತಲುಪಿ ಪರೀಕ್ಷೆ ಯಶಸ್ವಿಯಾಗಿಸಿದೆ.

ಗ್ರೇಟರ್ ನೋಯ್ಡಾದ ಜಿಐಎಮ್‌ಎಸ್ ಆಸ್ಪತ್ರೆಯಿಂದ ನೋಯ್ಡಾ ಸೆಕ್ಟರ್ 62ರಲ್ಲಿ ಇರುವ ಜೆಪಿ ಇನ್‌ಸ್ಟಿಟ್ಯೂಟ್‌ಗೆ ಡ್ರೋನ್ ಮೂಲಕ ರಕ್ತವನ್ನು ಸಾಗಿಸಲಾಗಿದೆ. ಸುಮಾರು 35 ಕಿ.ಮೀ ದೂರದ ಆಸ್ಪತ್ರೆಯನ್ನು ಡ್ರೋನ್ 15 ನಿಮಿಷಗಳಲ್ಲಿ ತಲುಪಿದರೆ ಅದೇ ಕೆಲಸವನ್ನು ಮಾಡುವ ಅಂಬುಲೆನ್ಸ್ ಈ ದೂರವನ್ನು ಕ್ರಮಿಸಲು 1 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಇದನ್ನೂ ಓದಿ: ಈ ಬಾರಿ ದಾಖಲೆ ಮತದಾನ – ನಿಮ್ಮ ಜಿಲ್ಲೆಯಲ್ಲಿ ಎಷ್ಟು ವೋಟ್‌?

ಡ್ರೋನ್‌ನ ಯಶಸ್ವಿ ಪ್ರಯೋಗದ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆರೋಗ್ಯ ಕ್ಷೇತ್ರದಲ್ಲಿ ಮಾಡಲಾದ ಈ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ‘ಐ ಡ್ರೋನ್’ನೊಂದಿಗೆ ಭಾರತೀಯ ಆರೋಗ್ಯ ರಕ್ಷಣೆ ಭವಿಷ್ಯವನ್ನು ಸಿದ್ಧಗೊಳಿಸಲಾಗಿತ್ತಿದೆ. ಡ್ರೋನ್ ಮೂಲಕ ರಕ್ತದ ಚೀಲ ವಿತರಣೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕೆಲವು ಸಮಯದಿಂದ ಡ್ರೋನ್ ಬಳಸಿ ಅಂಗಗಳನ್ನು ಸಾಗಿಸಲು ಯೋಜಿಸುತ್ತಿದೆ. ಜಿಐಎಮ್‌ಎಸ್‌ನ ನಿರ್ದೇಶಕ ಡಾ. ರಾಕೇಶ್ ಗುಪ್ತಾ, ಶೀಘ್ರವೇ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ. ಆದರೆ ಅಂಗಾಂಗಗಳನ್ನು ಒಂದು ಕಡೆಯಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲು ಗ್ರೀನ್ ಕಾರಿಡಾರ್ ಸಿದ್ಧಪಡಿಸುವ ಅಗತ್ಯವಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರೀ ಸ್ಫೋಟ – ಬೆಂಕಿಗೆ ಕಾರುಗಳು ಆಹುತಿ