ಅಂಬುಲೆನ್ಸ್ ನಲ್ಲಿ ಮೂತ್ರವಿಸರ್ಜನೆ ಮಾಡಿದ್ದಕ್ಕೆ ಗಾಯಾಳುವನ್ನ ತಲೆಕೆಳಗಾಗಿ ಬಿಟ್ಟ ಚಾಲಕ, ವ್ಯಕ್ತಿ ಸಾವು

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಂಬುಲೆನ್ಸ್ ನಲ್ಲಿ ಮೂತ್ರವಿಸರ್ಜನೆ ಮಾಡಿದರೆಂದು ಅವರನ್ನು ಚಾಲಕ ಸ್ಟ್ರೆಚ್ಚರ್ ಸಮೇತ ತಲೆಕೆಳಗಾಗಿ ಬಿಟ್ಟ ಅಮಾನವೀಯ ಘಟನೆ ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ಗಾಯಾಳು ಮಲಗಿದ್ದ ಸ್ಟ್ರೆಚ್ಚರನ್ನು ಆಂಬುಲೆನ್ಸ್ ಚಾಲಕ ಆಸ್ಪತ್ರೆಯ ಹೊರಗಡೆ ತಲೆಕೆಳಗಾಗಿ ಬಿಟ್ಟಿದ್ದು, ಬಳಿಕ ಅವರು ಸಾವನ್ನಪ್ಪಿದ್ದಾರೆ. ತಲೆಕೆಳಗಾದ ಸ್ಟೆಚ್ಚರ್‍ನ ಒಂದು ಭಾಗ ನೆಲದ ಮೇಲಿದ್ದು ಮತ್ತೊಂದು ತುದಿ ಆಂಬುಲೆನ್ಸ್ ನಲ್ಲಿತ್ತು. ವ್ಯಕ್ತಿಯ ತಲೆ ನೆಲಕ್ಕೆ ಬಿದ್ದ ಸ್ಥಿತಿಯಲ್ಲಿದ್ದು, ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯ ಜೀವಕ್ಕೆ ಕುತ್ತು ತಂದ ಆಂಬುಲೆನ್ಸ್ ಚಾಲಕನ ಬೇಜವಾಬ್ದಾರಿ ವರ್ತನೆಗೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾವನ್ನಪ್ಪಿದ ವ್ಯಕ್ತಿ ಮಾರ್ಚ್ 20ರಂದು ರಸ್ತೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ತಲೆಗೂ ಕೂಡ ಪೆಟ್ಟು ಬಿದ್ದಿತ್ತು. ಮೊದಲಿಗೆ ಅವರನ್ನು ಪಲಕ್ಕಾಡ್‍ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅದೇ ದಿನ ಹೆಚ್ಚಿನ ಚಿಕಿತ್ಸೆಗೆಂದು ತ್ರಿಶೂರ್‍ಗೆ ರವಾನಿಸಲಾಗಿತ್ತು. ಅಲ್ಲಿ ಸುಮಾರು 8.30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ಜೊತೆ ಅವರ ಕುಟುಂಬ ಸದಸ್ಯರಾಗಲೀ, ಸಂಬಂಧಿಕರಾಗಲಿ ಇಲ್ಲದಿದ್ದ ಕಾರಣ ಪಲಕ್ಕಾಡ್ ಆಸ್ಪತ್ರೆಯ ಸಿಬ್ಬಂದಿಯೇ ಗಾಯಾಳುವನ್ನ ತ್ರಿಶೂರ್ ಆಸ್ಪತ್ರೆಗೆ ಕರೆತಂದಿದ್ದರು. ಸಿಬ್ಬಂದಿ ಗ್ಲೋವ್ಸ್ ತರಲು ಆಸ್ಪತ್ರೆಯ ಒಳಗೆ ಹೋದಾಗ ಚಾಲಕ ಸ್ಟ್ರೆಚ್ಚರ್ ಹೊರಗೆಳೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ತಲೆಕೆಳಗಾದ ಸ್ಟ್ರೆಚ್ಚರ್ ಮೇಲೆ ಅಸಹಾಯಕರಾಗಿ ಬಿದ್ದಿದ್ದ ಗಾಯಾಳುವನ್ನ ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಮೇಲೆತ್ತಿ ವ್ಹೀಲ್‍ಚೇರ್ ಮೇಲೆ ಕೂರಿಸಿದ್ದರು. ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದ್ರೂ ಶನಿವಾರ ಬೆಳಗ್ಗೆ ಕೊನೆಯಿಸಿರೆಳೆದಿದ್ದಾರೆ.

Comments

Leave a Reply

Your email address will not be published. Required fields are marked *