ರಸ್ತೆ ಮೇಲೆ ಬಿದ್ದಿದ್ದ ಬ್ಯಾನರ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಚಾಲಕ ಸಾವು

ಕಲಬುರಗಿ: ರಸ್ತೆ ಮೇಲೆ ಬಿದ್ದಿದ್ದ ಬ್ಯಾನರ್ ತೆಗೆಯಲು ಹೋಗಿದ್ದಾಗ ವಿದ್ಯುತ್ ತಂತಿ ತಗಲು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ ಹುಮನಾಬಾದ್ ರಸ್ತೆಯಲ್ಲಿ ನಡೆದಿದೆ.

ರಫೀಕ್ ಮೃತ ವ್ಯಕ್ತಿಯಾಗಿದ್ದು, ಹರಕಂಚಿ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ವೃತ್ತಿಯಲ್ಲಿ ಕ್ರೂಸರ್ ಚಾಲಕನಾಗಿದ್ದಾರೆ. ಹುಮನಾಬಾದ್ ರಸ್ತೆಯಲ್ಲಿ ಬಿದ್ದಿದ್ದ ಬ್ಯಾನರ್ ತೆಗೆದು ಹಾಕುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.

ನಗರದಲ್ಲಿ ಸಚಿವ ಪ್ರೀಯಾಂಕ್ ಖರ್ಗೆ ಅವರ ಸ್ವಾಗತಕ್ಕೆಂದು ಕಾರ್ಯಕರ್ತರು ರಸ್ತೆ ಬದಿಗಳ ವಿದ್ಯುತ್ ಕಂಬಕ್ಕೆ ಬ್ಯಾನರ್ ಕಟ್ಟಿದ್ದರು. ಈ ಬ್ಯಾನರ್ ಗಳ ಪೈಕಿ ಒಂದು ರಸ್ತೆ ಮೇಲೆ ಬಿದ್ದಿತ್ತು. ಇಂದು ಬೆಳಗಿನ ಜಾವ ಇದೇ ರಸ್ತೆಯಲ್ಲಿ ಬಂದ ಕ್ರೂಸರ್ ನ ಚಾಲಕ ರಫೀಕ್ ರಸ್ತೆ ಮೇಲೆ ಬಿದ್ದಿದ್ದ ಬ್ಯಾನರ್ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು  ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗ್ರಾಮೀಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *