ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಾಲಾ ವಾಹನ ಪ್ರಕರಣ- ಶಾಲೆ ವಿರುದ್ಧ ಕ್ರಮ, ಚಾಲಕ ಅರೆಸ್ಟ್

ಬೆಂಗಳೂರು/ರಾಯಚೂರು: ರಾಯಚೂರಿನಲ್ಲಿ ಶಾಲಾ ವಾಹನದ ಚಾಲಕ ವಿದ್ಯಾರ್ಥಿಯನ್ನು ವಾಹನದ ಫುಟ್ ಸ್ಟ್ಯಾಂಡ್ ನಿಲ್ಲಿಸಿ ಕರೆದುಕೊಂಡು ಹೋದ ಪ್ರಕರಣದಿಂದ ಜಿಲ್ಲಾ ಎಸ್ಪಿ ಡಾ.ವೇದಮೂರ್ತಿ ಎಚ್ಚೆತ್ತುಕೊಂಡಿದ್ದು, ಮಾನವಿ ಪೊಲಿಸರು ವಾಹನ ಚಾಲಕನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿದ್ದಾರೆ. ಅಲ್ಲದೆ ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಪಬ್ಲಿಕ್ ಟಿವಿ ಜೊತೆ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಶಾಲಾ ವಾಹನದ ಫುಟ್ ಸ್ಟ್ಯಾಂಡ್ ಮೇಲೆ ವಿದ್ಯಾರ್ಥಿಯನ್ನು ಚಾಲಕ ಕರೆದೊಯ್ಯುತ್ತಿರುವ ಸ್ಕ್ರೀನ್ ಶಾಟ್ ಅನ್ನು ಯಾರೋ ನನಗೆ ಕಳುಹಿಸಿದ್ದಾರೆ. ಅದನ್ನು ನೋಡಿದ ಕೂಡಲೇ ನಾನು ರಾಯಚೂರು ಡಿಸಿ ವೆಂಕಟೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಇವತ್ತೇ ಆ ಶಾಲೆ ಹಾಗೂ ಟ್ರಾನ್ಸ್‌ಪೋರ್ಟರ್ ಮೇಲೆ ಎಫ್‍ಐಆರ್ ಹಾಕಲು ಹೇಳಿದ್ದೇನೆ. ಇದೇ ವಾರದಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ(ಡೇರಾ) ಸಮಿತಿಯ ಸಭೆ ಮಾಡಿ, ರಾಯಚೂರಿನ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಕರೆದು ಪೊಲೀಸರ ಸಮ್ಮುಖದಲ್ಲಿ ಈ ವ್ಯವಸ್ಥೆಗೆ ಬ್ರೇಕ್ ಹಾಕಬೇಕು ಎಂದು ಹೇಳಿದ್ದೇನೆ ಎಂದರು.

ಮಕ್ಕಳನ್ನು ಈ ರೀತಿ ಫುಟ್ ಸ್ಟ್ಯಾಂಡ್ ಮೇಲೆ ಕರೆದುಕೊಂಡು ಹೋಗಿದ್ದನ್ನು ನೋಡಿ ಬೇಸರವಾಗಿದೆ. ಈ ಪ್ರಕರಣ ಇತ್ಯರ್ಥ ಆಗುವವರೆಗೂ ನಾನು ಫಾಲೋ ಮಾಡುತ್ತೇನೆ. ಮಧ್ಯಾಹ್ನ ಈ ಕುರಿತು ರಾಜ್ಯ ಮಟ್ಟದ ಸಭೆ ಕರೆದು ಕ್ರಮ ತೆಗೆದುಕೊಳ್ಳುತ್ತೇನೆ. ಹೀಗೆ ಬೇರೆ ಜಿಲ್ಲೆಗಳಲ್ಲಿ ಆಗಬಾರದು. ಆದ್ದರಿಂದ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಏನಿದು ಪ್ರಕರಣ?
ಜಿಲ್ಲೆಯ ಮಾನವಿ ಪಟ್ಟಣದ ಎಸ್‍ಯುಪಿಎಂ ಮೌಂಟೆಸ್ಸರಿ ಇಂಗ್ಲಿಷ್ ಮಾಧ್ಯಮ ಶಾಲೆ ಮಕ್ಕಳನ್ನು ಅಪಾಯದಲ್ಲಿ ಶಾಲಾ ವಾಹನದಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರಾಣಿಗಳಂತೆ ಮಕ್ಕಳನ್ನು ವಾಹನದಲ್ಲಿ ತುಂಬಿದ್ದಲ್ಲದೇ, ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ವಿದ್ಯಾರ್ಥಿಯನ್ನು ನಿಲ್ಲಿಸಿಕೊಂಡು ಕರೆದೊಯ್ಯಲಾಗಿದೆ.

ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಆಡಳಿತ ಮಂಡಳಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *