ಮಾದಪ್ಪನ ಸನಿಹದಲ್ಲೇ ನೀರಿಗೆ ಹಾಹಾಕಾರ – ಬಾವಿ ತಳದಲ್ಲಿರುವ ಕೊಳಚೆ ನೀರೇ ಆಧಾರ

ಚಾಮರಾಜನಗರ: ಜಿಲ್ಲೆಯಲ್ಲಿ ಬಾವಿಗಳೆಲ್ಲಾ ಬತ್ತಿ ಹೋಗಿದ್ದು, ಬಾವಿಯ ತಳದಲ್ಲಿರುವ ಕೊಳಚೆ ನೀರನ್ನೇ ಸೋಸಿ ಕುಡಿಯುವ ದುಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಆಡಳಿತಪಕ್ಷ ಹಾಗೂ ವಿರೋಧ ಪಕ್ಷದವರು ಸ್ಪರ್ಧೆಗೆ ಬಿದ್ದವರಂತೆ ಬರ ಅಧ್ಯಯನದ ಶೋ ನೀಡುತ್ತಿದ್ದಾರೆ. ಆದರೆ ಇಲ್ಲಿನ ಜನರು ಹನಿ ಹನಿ ನೀರಿಗೂ ಪರಿತಪಿಸುತ್ತಿರುವ ಪರಿಸ್ಥಿತಿ ನೋಡಿದರೆ ಯಾವ ಪುರುಷಾರ್ಥಕ್ಕೆ ಇವರು ಬರ ಅಧ್ಯಯನ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಪಡಸಲನತ್ತ, ನಾಗನತ್ತ, ಕೊಕ್ಕಬೋರೆ, ದೊಡ್ಡಾಣೆ, ತೋಕರೆ ಮೊದಲಾದ ಗ್ರಾಮಗಳು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ವಿದ್ಯುತ್ ಸಂಪರ್ಕವಿರಲಿ, ಇಲ್ಲಿ ಒಂದು ಬೋರ್ ವೆಲ್ ಸಹ ಇಲ್ಲ. ಅತ್ಯಂತ ಹಿಂದುಳಿದ ಜನರೇ ವಾಸಿಸುವ ಈ ಕುಗ್ರಾಮಗಳಲ್ಲಿ ಇಂದಿಗೂ ಬಾವಿ ನೀರೇ ಗತಿ. ಬೇಸಿಗೆ ಆರಂಭವಾಗುತ್ತಿದ್ದಂತೆ ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಬಾವಿಗಳೆಲ್ಲಾ ಬತ್ತಿ ಹೋಗಿವೆ. ಹಾಗಾಗಿ ಬಾವಿಯ ತಳದಲ್ಲಿರುವ ಕೊಳಚೆ ನೀರನ್ನೇ ಸೇದಿ ಅದನ್ನು ಸೋಸಿ ಕುಡಿಯುವ ದುಸ್ಥಿತಿ ಎದುರಾಗಿದೆ. ಹನಿಹನಿ ನೀರಿಗೂ ಪರಿತಪಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ಮಾದೇವಿ ಹೇಳುತ್ತಿದ್ದಾರೆ.

ಇಲ್ಲಿನ ಪರಿಸ್ಥಿತಿ ಹೀಗಾದರೆ ಇನ್ನೊಂದೆಡೆ ರಾಜ್ಯದೆ ವಿವಿಧೆಡೆ ಆಡಳಿತ ಪಕ್ಷ ಹಾಗು ವಿಪಕ್ಷದ ನಾಯಕರು ರೇಸ್‍ಗೆ ಬಿದ್ದವರಂತೆ ಬರ ಅಧ್ಯಯನದ ಶೋ ನೀಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಗೂ ಸಚಿವರಾದ ಕೃಷ್ಣಬೈರೇಗೌಡ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪ ಭೇಟಿ ನೀಡಿದ್ದರು. ಆದರೆ ಬರ ಇರುವ ಮಹದೇಶ್ವರಬೆಟ್ಟದ ಸುತ್ತಮುತ್ತ ಗ್ರಾಮಗಳತ್ತ ಮಾತ್ರ ಇವರು ತಲೆಹಾಕದೇ ಮುಖ್ಯರಸ್ತೆಗಳ ಆಜುಬಾಜಿನ ಗ್ರಾಮಗಳಿಗೆ ಭೇಟಿ ನೀಡಿ ಕಾಟಾಚಾರದ ಬರಪರಿಶೀಲನೆ ನಡೆಸಿ ಹೋಗಿದ್ದಾರೆ.

ಹನಿಹನಿ ನೀರಿಗೂ ಪರಿತಪಿಸುತ್ತಿರುವ ಜನರ ಪರಿಸ್ಥಿತಿ ನೋಡಿದರೆ ಯಾವ ಪುರುಷಾರ್ಥಕ್ಕೆ ಇವರು ಬರ ಅಧ್ಯಯನ ನಡೆಸುತ್ತಿದ್ದಾರೋ ಗೊತ್ತಿಲ್ಲ. ಕುಡಿಯುವ ನೀರು ಪೂರೈಸಲು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಇಲ್ಲಿನ ಜನರು ಆಗ್ರಹಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *