ಮಂಗಳೂರು: ನಗರದಲ್ಲಿ ಕರ್ತವ್ಯನಿತರ ಸಂಚಾರ ಪೊಲೀಸ್ ಪೇದೆಯೊಬ್ಬರು ಕಂಠಪೂರ್ತಿ ಕುಡಿದು, ರಸ್ತೆ ಮಧ್ಯದಲ್ಲಿ ತೂರಾಡಿದ್ದಾರೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಕಮಿಷನರ್ ಟಿ.ಆರ್ ಸುರೇಶ್ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಪಶ್ಚಿಮ ಸಂಚಾರ ಠಾಣೆಯ ಅಶೋಕ್ ಗೌಡ ಅಮಾನತುಗೊಂಡ ಪೊಲೀಸ್ ಪೇದೆ. ಅಶೋಕ್ ಅವರು ಹಾಡಹಗಲೇ ಮದ್ಯ ಸೇವಿಸಿ, ನಗರದ ಲಾಲ್ ಬಾಗ್‍ನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ನಿಂತಿದ್ದಾರೆ. ಜನರು ಇದ್ದರೂ ಲೆಕ್ಕಿಸದ ಅಶೋಕ್ ರಸ್ತೆ ಮೇಲೆ ಬಸ್‍ಗಳಿಗೆ ಅಡ್ಡ ನಿಲ್ಲುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಕರ್ತವ್ಯದಲ್ಲಿರುವ ಪೊಲೀಸರು ಮದ್ಯ ಸೇವಿಸುವುದು ನಿಷಿದ್ಧ. ಹಾಗಿದ್ದರೂ, ಅಶೋಕ್ ಅವರು ಯೂನಿಫಾರ್ಮ್ ನಲ್ಲಿದ್ದುಕೊಂಡೇ ಕುಡಿದು ತೂರಾಡಿದ್ದಾರೆ. ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ, ನಾನು ಕರ್ತವ್ಯದಲ್ಲಿ ಇಲ್ಲ. ನೀವು ಇನ್ನು ಹೊರಡಿ, ಯೂನಿಫಾರ್ಮ್ ಹಾಕಿರುವುದು ನಿಜ. ಆದರೆ ಡ್ಯೂಟಿ ಇಲ್ಲ ಎಂದು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿಯೇ ಸಂಚಾರ ನಿರ್ವಹಣೆಗೆ ಮುಂದಾಗಿದ್ದ ಅಶೋಕ್ ತೂರಾಡುತ್ತ ರಸ್ತೆ ಮಧ್ಯೆ ಹೋಗಿದ್ದರು. ಇದರಿಂದ ಗಾಬರಿಗೊಂಡ ಕೆಲ ಸ್ಥಳೀಯರು ಅವರನ್ನು ಎಳೆದು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಕೂರಿಸಿದ್ದಾರೆ. ಇತ್ತ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಮಾಹಿತಿಯು ಮಂಗಳೂರು ಕಮಿಷನರ್ ಟಿ.ಆರ್.ಸುರೇಶ್ ಅವರಿಗೆ ತಿಳಿದಿದ್ದು, ತಕ್ಷಣವೇ ಅಶೋಕ್ ಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply