ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

ಬೆಂಗಳೂರು: ನಿಮಗೆ ನಾಚಿಕೆ ಆಗಬೇಕು. ನಿಮ್ಮ ವಿರುದ್ಧ ನಾನು ಕಾನೂನು ಸಮರ ಆರಂಭಿಸುತ್ತೇನೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗಿದ್ದಾರೆ.

ಇಂದು ಬೆಳಗ್ಗೆ ಬ್ರಿಜೇಶ್ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ಸೋಮ್ ದತ್ತಾ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ದರು. ಈ ಸಂಬಂಧ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೋಮ್ ದತ್ತಾ, ಮಹಿಳೆಗೆ ಗೌರವ ನೀಡದ ಬ್ರಿಜೇಶ್ ಕಾಳಪ್ಪರಿಗೆ ನಾಚಿಕೆ ಆಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನಿಮ್ಮ ರಾಜಕೀಯ ಆಟದಲ್ಲಿ ನನ್ನ ಬಳಸಿಕೊಳ್ಳುವುದನ್ನು ನಿಲ್ಲಿಸಿ. ಈಗಾಗಲೇ ಮಹಿಳಾ ಆಯೋಗಕ್ಕೆ ಪತ್ರ ಬರೆದ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಕೇಸ್ ದಾಖಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆಡಿಯೋ ಕ್ಲಿಪ್ ನಲ್ಲಿ ಹೆಚ್ಚಿನ ಮಾಹಿತಿಗಳು ನನ್ನ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿವೆ. ನನ್ನ ಹೇಳಿಕೆಗಳನ್ನು ರಾಜಕೀಯಗೊಳಿಸಿ ತಿರುಚಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟನೆ ನೀಡುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸದಂತೆ ಮನವಿ ಮಾಡಿಕೊಳ್ಳುತ್ತೇನೆ.

ನನ್ನ ಖಾಸಗಿ ಸಂಭಾಷಣೆಯನ್ನು ನನ್ನ ಅನುಮತಿ ಪಡೆಯದೇ ಪ್ರಕಟಿಸಲಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ. ನನ್ನ ಖಾಸಗೀತನಕ್ಕೆ ಧಕ್ಕೆ ತಂದವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ರಾಜಕೀಯಕ್ಕಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರಿಗೆ ನಾಚಿಕೆಯಾಗಬೇಕು. ನನ್ನ ಘನತೆಗೆ ಕುಂದು ತಂದಿದ್ದಕ್ಕೆ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಮೊರೆ ಹೋಗುತ್ತೇನೆ. ಇದನ್ನು ಓದಿ: ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ: ಡಿಸಿಪಿ ಇಶಾ ಪಂತ್

ಬ್ರಿಜೇಶ್ ಕಾಳಪ್ಪ ಹೇಳಿದ್ದೇನು?
ಇಂದು ಸುದ್ದಿಗೋಷ್ಠಿ ನಡೆಸಿ ಸೋಮ್ ದತ್ತಾ ಅವರ ಆಡಿಯೋ ಕ್ಲಿಪ್ ಅನ್ನು ಬ್ರಿಜೇಶ್ ಕಾಳಪ್ಪ ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರಿಗೆ ಗೊತ್ತಿದ್ರೂ ಸುಮ್ಮನಿದ್ದಾರೆ. ತೇಜಸ್ವಿ ಸೂರ್ಯ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುವುದು ಆಡಿಯೋ ಕ್ಲಿಪ್ ಹೇಳುತ್ತದೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

ನನ್ನ ರೀತಿಯಲ್ಲಿಯೇ ಇನ್ನಿಬ್ಬರು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸೋಮ್ ದತ್ತಾ ತಮ್ಮ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ತೇಜಸ್ವಿ ಸೂರ್ಯ ಉಮೇದುವಾರಿಕೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಉಲ್ಲೇಖಿಸಿಲ್ಲ. ಡಾ. ಸೋಮ್ ದತ್ತಾ ದಾಖಲಿಸಿರುವ ದೂರಿನ ಬಗ್ಗೆ ತೇಜಸ್ವಿ ಸೂರ್ಯ ಎಲ್ಲಿಯೂ ಹೇಳಿಲ್ಲ. ತೇಜಸ್ವಿ ಸೂರ್ಯ ಮೂರು ಆರೋಪಗಳಿದ್ದು, ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *