ಡಾ.ರಾಜ್‍ಕುಮಾರ್ ಮಣ್ಣಿನ ಪುತ್ಥಳಿ ನಿರ್ಮಾಣ: ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದು ಹೀಗೆ!

ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 6 ಅಡಿ ಮಣ್ಣಿನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಶಿವರಾಜ್‍ಕುಮಾರ್ ಮಾತ್ರ ಪುತ್ಥಳಿ ನಿರ್ಮಾಣ ಮಾಡುವುದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ ಅವರ ಮಣ್ಣಿನ ಮೂರ್ತಿ ನಿರ್ಮಾಣ ಮಾಡಿ ಅದಕ್ಕೆ ಪೂಜೆ ಮಾಡಿ ಕೆರೆಗೆ ವಿಸರ್ಜನೆ ಮಾಡಲು ದೊಡ್ಮನೆಯ ಅಭಿಮಾನಿಗಳು ಮುಂದಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಣ್ಣಿನ ಪುತ್ಥಳಿಕೆಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯ ಮತ್ತು ಜಲಚರಗಳಿಗೆ ಹಾನಿ ಉಂಟಾಗುತ್ತದೆ ಎಂದು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ.

ಶಿವಣ್ಣ ಹೇಳಿದ್ದು ಹೀಗೆ:
ಅಪ್ಪಾಜಿಯ ಬಗ್ಗೆ ಜನರಿಗೆ ತುಂಬಾ ಅಭಿಮಾನವಿದೆ. ಅಪ್ಪಾಜಿ ಬದುಕಿದ್ದೇ ಅಭಿಮಾನಿಗಳಿಗೋಸ್ಕರ, ಅಪ್ಪಾಜಿ ಅವರು ನಾನು ಸತ್ತ ಮೇಲೆ ನನ್ನ ಹೂಳಲು ಜಾಗ ವೇಸ್ಟ್ ಮಾಡಬೇಡಿ. ಆ ಜಾಗವನ್ನು ಯಾರಿಗಾದ್ರೂ ಕೊಡಿ ಎಂದು ಹೇಳಿದ್ದರು. ಅಭಿಮಾನಿಗಳು ಏನೇ ಮಾಡಿದ್ರೂ ಅಪ್ಪಾಜಿಯ ಆಸೆ, ಆಕಾಂಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡ್ಬೇಕು. ಅಭಿಮಾನಿಗಳ ಅಭಿಮಾನದಿಂದ ಯಾರಿಗೂ ತೊಂದರೆ ಆಗಬಾರದು. ಗಣಪತಿಯನ್ನು ಪೂಜೆ ಮಾಡಿ, ವಿಸರ್ಜನೆ ಮಾಡ್ತಿವಿ. ಅಪ್ಪಾಜಿಯೇ ಮನೆಯಲ್ಲಿ ಗಣಪತಿಯನ್ನು ಪೂಜೆ ಮಾಡುತ್ತಿದ್ದರು. ಅಪ್ಪಾಜಿಯನ್ನು ಗಣಪತಿ ದೇವರಿಗೆ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿಕೊಂಡರು.

ಅಪ್ಪಾಜಿಯ ಪುತ್ಥಳಿ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಅಪ್ಪಾಜಿಯ ಪುತ್ಥಳಿಗಳು ಸಾಕಷ್ಟಿವೆ. ಅಪ್ಪಾಜಿಯನ್ನು ಅಭಿಮಾನಿಗಳು ಮನುಷ್ಯನ ರೂಪದಲ್ಲಿ ನೋಡುವುದು ಒಳ್ಳೇಯದು. ದೇವರ ರೂಪದಲ್ಲಿ ಬೇಡ. ಪರಿಸರ ನಮಗೆ ಮುಖ್ಯ. ಹಾಗಾಗಿ ಅದನ್ನು ನಾವು ಕಾಪಾಡಬೇಕು. ದಯವಿಟ್ಟು ಅಪ್ಪಾಜಿಯ ಮಣ್ಣಿನ ಪುತ್ಥಳಿ ನಿರ್ಮಾಣ ಬೇಡ. ಅಪ್ಪಾಜಿಯ ಮೂರ್ತಿ ನಿರ್ಮಾಣ ಮಾಡುವುದರಿಂದ ಇನ್ನೊಬ್ಬರಿಗೆ ತೊಂದರೆ ಆಗುವಂತಿದ್ದರೆ ಅದು ಖಂಡಿತ ಬೇಡ ಎಂದು ಶಿವಣ್ಣ ಹೇಳಿದರು.

ಈ ರೀತಿ ಪ್ರತಿಮೆಗಳನ್ನು ಮಾಡೋದ್ರಿಂದ ಪರಿಸರ ಹಾಳಾಗುತ್ತೆ. ಉಳಿದ ಕಲಾವಿದರ ಅಭಿಮಾನಿಗಳು ಈ ಟ್ರೆಂಡ್ ಶುರು ಮಾಡಿದ್ರೆ ಪರಿಸರ ನಾಶವಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

https://youtu.be/IsuH0NIoeqs

 

Comments

Leave a Reply

Your email address will not be published. Required fields are marked *