ಸಂಭವನೀಯ ಮೂರನೇ ಅಲೆ ಸಂಬಂಧಿಸಿದ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ: ಸುಧಾಕರ್

-18 ಸಾವಿರ ದಾದಿಯರಿಗೆ ತರಬೇತಿ

ಬೆಂಗಳೂರು: 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ಆರೋಗ್ಯ ಸೌಧದಲ್ಲಿ ವೀಡಿಯೋ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿದ್ದು, ಸಂಭವನೀಯ ಮೂರನೇ ಅಲೆ ಅಥವಾ ಹೊಸ ಓಮಿಕ್ರಾನ್ ವೈರಾಣು ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಎಚ್‍ಒಡಿ, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಅಶೋಕ್

ಒಂದನೇ ಮತ್ತು ಎರಡನೇ ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನಸಿರ್ಂಗ್, ಪ್ಯಾರಾ ಮೆಡಿಕಲ್ ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ

ಮಕ್ಕಳ ಐಸಿಯು ಸಿದ್ಧ:
ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಸಂಸ್ಥೆಗಳು ಮುಂದಿಟ್ಟ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗಿದೆ. ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳು ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಎಚ್‍ಆರ್, ಎಂಎಸ್‍ನಲ್ಲಿ ನೋಂದಣಿಗೆ ಸಂಸ್ಥೆಗಳು 20 ದಿನಗಳ ಕಾಲ ತೆಗೆದುಕೊಂಡಿವೆ. ಡಿಸೆಂಬರ್‍ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದು ವಿವರಿಸಿದರು.

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಓಮಿಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು ಎಂದರು. ಇದನ್ನೂ ಓದಿ: ಕೇರಳದಿಂದ ಬಂದ 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ವಾರಂಟೈನ್

ಆಫ್ರಿಕಾದಿಂದ ಬಂದ 57 ಪ್ರಯಾಣಿಕರು ಪತ್ತೆ ಆಗದಿರುವ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಹೀಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಉತ್ತಮ ಕೆಲಸ ಮಾಡಿತ್ತು. ಈ ಬಾರಿಯೂ ಪೊಲೀಸ್ ಇಲಾಖೆ ದಕ್ಷತೆ ತೋರಲಿದೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವ ಪ್ರಯಾಣಿಕರು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

Comments

Leave a Reply

Your email address will not be published. Required fields are marked *