ನಿವೃತ್ತ ನ್ಯಾಯಾಧೀಶರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲು

ಹೈದರಾಬಾದ್: ನಿವೃತ್ತ ನ್ಯಾಯಾಧೀಶರ ವಿರುದ್ಧ ವರಕ್ಷಿಣೆ ಕಿರುಕುಳ ಕೇಸ್ ದಾಖಲಾದ ಘಟನೆ ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

ಸಿಂಧು ಶರ್ಮಾ (30) ತನ್ನ ಮಾವ ನಿವೃತ್ತ ನ್ಯಾಯಾಧೀಶ ನೂಟಿ ರಾಮಾಮೋಹನಾ ರಾವ್ ಅವರ ವಿರುದ್ಧ ಹೈದರಾಬಾದ್‍ನ ಸೆಂಟ್ರಲ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಂಧು ತನ್ನ ಅತ್ತೆ ನೂಟಿ ದುರ್ಗಾ ಜಯಲಕ್ಷ್ಮಿ ಹಾಗೂ ಪತಿ ನೂಟಿ ವಸಿಷ್ಠ ನಿರಂತರವಾಗಿ ಕಿರುಕುಳ ನೀಡಿದಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ನಾನು 2012ರಲ್ಲಿ ವಸಿಷ್ಠರನ್ನು ಮದುವೆಯಾಗಿದ್ದೆ. ನಮಗೆ ಈಗ ಇಬ್ಬರು ಮಕ್ಕಳು ಕೂಡ ಇದ್ದಾರೆ. ನಾನು ಮದುವೆಯಾದ ಹೊಸತರಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ವರದಕ್ಷಿಣೆ ತರುವಂತೆ ದೈಹಿಕವಾಗಿ ಹಲ್ಲೆ ಮಾಡಿ ಕಿರುಕುಳ ನೀಡಲು ಶುರು ಮಾಡಿದ್ದರು. ಏಪ್ರಿಲ್ 20ರಂದು ನನ್ನ ಮೇಲೆ ಹಲ್ಲೆ ಮಾಡಿದ್ದಾಗ ನಾನು ಆಸ್ಪತ್ರೆಗೆ ದಾಖಲಾದೆ. ನನ್ನ ಗಾಯಗಳನ್ನು ನೋಡಿ ವೈದ್ಯರು ಎಂಎಲ್‍ಸಿ (ಮೇಡಿಕೋ ಲಿಗಲ್ ಕೇಸ್) ದಾಖಲಿಸುವಂತೆ ಒತ್ತಾಯಿಸಿದರು.

ತನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದಂತೆ ಸಿಂಧು ತನ್ನ ಪೋಷಕರ ಜೊತೆ ಸೇರಿ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಅವರ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಂಧು ಈಗ ಉಪ್ಪಾಲ್‍ನಲ್ಲಿ ಇರುವ ಪೋಷಕರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323, 406, 498ಎ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸಮನ್ಸ್ ಜಾರಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *