ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

ಲಕ್ನೋ: ಯೋಗಿ ಆದಿತ್ಯನಾಥ್ (Yogi Adityanath) ಅವರ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಜೈಲಿನಲ್ಲಿರುವ (Jail) ಮಾಜಿ ಶಾಸಕನೊಬ್ಬ ತನ್ನ ಮೇಲೆ ಎನ್‌ಕೌಂಟರ್ (Encounter) ಆಗುವ ಭೀತಿಯಿಂದ ಜೈಲಿನಿಂದ ದಯವಿಟ್ಟು ಹೊರಗೆ ಕಳುಹಿಸಬೇಡಿ ಎಂದು ಕೋರ್ಟ್‌ಗೆ (Court) ಮನವಿ ಮಾಡಿದ್ದಾನೆ.

ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ (Ashraf) ಉತ್ತರ ಪ್ರದೇಶದ ಬರೇಲಿಯಲ್ಲಿರುವ ಜೈಲಿನಲ್ಲಿದ್ದು, ತನ್ನನ್ನು ಜೈಲಿನಿಂದ ಹೊರಗೆ ವರ್ಗಾಯಿಸುವುದರಿಂದ ಎನ್‌ಕೌಂಟರ್ ಆಗುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾನೆ. ಕಳೆದ ವಾರ ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ (Umesh Pal) ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದರು. ಈ ಹಿನ್ನೆಲೆ ಇದೀಗ ಅಶ್ರಫ್ ತನ್ನ ಮೇಲೂ ದಾಳಿ ನಡೆಯುವ ಭೀತಿಯನ್ನು ವ್ಯಕ್ತಪಡಿಸಿದ್ದಾನೆ.

ಬಿಎಸ್‌ಪಿ ಶಾಸಕರಾಗಿದ್ದ ರಾಜು ಪಾಲ್ (Raju Pal) ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಅಲಹಾಬಾದ್‌ನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಕಾಲಿದ್ ಅಜೀಂ ಅವರನ್ನು ಸೋಲಿಸಿ ರಾಜು ಪಾಲ್ ಗೆದ್ದಿದ್ದರು. ಇದಾದ ತಿಂಗಳ ಬಳಿಕ ಅವರ ಹತ್ಯೆ ನಡೆಸಲಾಗಿತ್ತು. ಇದನ್ನೂ ಓದಿ: UP ಉಮೇಶ್ ಪಾಲ್ ಕೊಲೆ ಕೇಸ್ – ಎನ್‍ಕೌಂಟರ್‌ಗೆ ಆರೋಪಿ ಬಲಿ

ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್, ಆತನ ಸಹೋದರ ಹಾಗೂ ಮಾಜಿ ಶಾಸಕ ಅಶ್ರಫ್ ಪ್ರಮುಖ ಆರೋಪಿಗಳಾಗಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಅಶ್ರಫ್ ಬರೇಲಿ ಜೈಲಿನಲ್ಲಿದ್ದರೆ, ಅತೀಕ್ ಅಹ್ಮದ್ ಸಬರಮತಿ ಜೈಲಿನಲ್ಲಿದ್ದಾನೆ.

ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನನ್ನು ಫೆಬ್ರವರಿ 24 ರಂದು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿತ್ತು. ಇದಾದ ಮರುದಿನವೇ ಅಶ್ರಫ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ನ್ಯಾಯಾಲಯದ ವಿಚಾರಣೆಗೆ ಅಥವಾ ಜೈಲಿನಿಂದ ವರ್ಗಾವಣೆಯಾಗುವ ಸಂದರ್ಭ ಜೈಲಿನ ಆವರಣದಿಂದ ಹೊರಗೆ ಹೋಗುವಾಗ ದಾರಿಯಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಬುಧವಾರದಿಂದ ಸರ್ಕಾರಿ ನೌಕರರ ಮುಷ್ಕರ: ಯಾವ ಕಚೇರಿಗಳು ಬಂದ್‌ ಆಗಲಿವೆ?

Comments

Leave a Reply

Your email address will not be published. Required fields are marked *