ಪ್ರಮಾಣವಚನಕ್ಕೆ ನಾನೂ ಹೋಗಲ್ಲ, ಯಾರೂ ಹೋಗ್ಬೇಡಿ- ದಿನೇಶ್ ಗುಂಡೂರಾವ್

ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಯಾರೂ ಭಾಗವಹಿಸಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್, ಇದೊಂದು ಅಪವಿತ್ರ ಕಾರ್ಯಕ್ರಮವಾಗಿದೆ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ಹೋಗುವುದನ್ನು ನಿರಾಕರಿಸುತ್ತೇನೆ. ಹಾಗೆಯೇ ಪಕ್ಷದ ನಾಯಕರೂ ಕೂಡ ಭಾಗವಹಿಸಬೇಡಿ ಎಂದು ಹೇಳಿದ್ದಾರೆ.

ಟ್ವೀಟ್ ನಲ್ಲೇನಿದೆ..?
ಕುದುರೆ ವ್ಯಾಪಾರ ಮತ್ತು ಭ್ರಷ್ಟ ಮಾರ್ಗದಲ್ಲಿ ಬಿಎಸ್‍ವೈ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಅಸಂವಿಧಾನಿಕ ಮತ್ತು ಅನೈತಿಕ. ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಈ ಅಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸುತ್ತೇನೆ, ಪಕ್ಷದ ಎಲ್ಲಾ ನಾಯಕರುಗಳಿಗೆ ಭಾಗವಹಿಸದಂತೆ ಸೂಚನೆ ನೀಡುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಬಿಎಸ್‍ವೈಗೆ ಟ್ಯಾಗ್ ಮಾಡಿದ್ದಾರೆ.

ನಿನ್ನೆಯಷ್ಟೇ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಅವರನ್ನು ಅನರ್ಹಗೊಳಿಸಿದ್ದರು. ಈ ಮೂಲಕ ಉಳಿದ ಅತೃಪ್ತರಿಗೆ ಶಾಕ್ ನೀಡಿದ್ದರು. ಈ ಮೂವರನ್ನು ಅನರ್ಹಗೊಳಿಸುವ ಮೂಲಕ ಉಳಿದ ಶಾಸಕರು ಇದರಿಂದ ಭಯಗೊಂಡು ಮತ್ತೆ ತಮ್ಮ ಸ್ಥಾನಕ್ಕೆ ಹಿಂದಿರುಗುತ್ತಾರೆ. ಇದರಿಂದ ಮತ್ತೆ ತಮ್ಮ ಸಂಖ್ಯಾಬಲ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ದೋಸ್ತಿಗಳಿದ್ದರು. ಅಲ್ಲದೆ ಈ ಮೂಲಕ ಮತ್ತೆ ಅಧಿಕಾರವೇರುವ ಹುಮ್ಮಸ್ಸಿನಲ್ಲಿದ್ದರು. ಇದೀಗ ದಿಢೀರ್ ರಾಜಕೀಯ ಬೆಳವಣಿಗೆಯಾಗಿದ್ದು, ಇಂದು ಸಂಜೆಯೇ ಮುಖ್ಯಮಂತ್ರಿಯಾಗಿ ಬಿಎಸ್ ವೈ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವಿಚಾರ ಇದೀಗ ದೋಸ್ತಿಗಳಿಗೆ ಕಗ್ಗಂಟಾಗಿದೆ.

Comments

Leave a Reply

Your email address will not be published. Required fields are marked *