ಸುಮ್ನೆ ನಮ್ಮನ್ನು ಬಲಿಪಶು ಮಾಡ್ಬೇಡಿ – ಸಿಎಂಗೆ ಬಿಎಸ್‍ವೈ ತಿರುಗೇಟು

ಬೆಂಗಳೂರು: ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ಸಂಚು ರೂಪಿಸಿದ್ದು, ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಆರೋಪ ಇದೀಗ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಎಚ್‍ಡಿಕೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಹೇಳಿಕೆ ಕೊಡುವಾಗ ಜವಾಬ್ದಾರಿಯುತವಾದ ಹೇಳಿಕೆಗಳನ್ನು ಕೊಡಬೇಕು. ನಮಗೂ ಅದಕ್ಕೂ ಯಾವ ಸಂಬಂಧ? ಯಾವ ಐಟಿ? ಯಾವ ಇಡಿ? ನಮಗೂ ಅದಕ್ಕೂ ಏನ್ ಸಂಬಂಧ? ಅನಗತ್ಯವಾಗಿ ಈ ತರದ ಹೇಳಿಕೆಗಳನ್ನು ಕೊಟ್ಟು ಗೊಂದಲವುಂಟು ಮಾಡಿ ಯಾರನ್ನೋ ಬಲಿಪಶು ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಪ್ರಯತ್ನವನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಬಾರದು ಅಂತ ಹೇಳಿದ್ರು.

ಆರೋಪ ಮಾಡುವ ಬದಲು ಏನಾದ್ರೂ ಪುರಾವೆಗಳಿದ್ದರೆ ತಿಳಿಸಲಿ. ನಮಗೂ ಐಟಿ, ಇಡಿಗೂ ಸಂಬಂಧವಿಲ್ಲ. ನಾವೇ ನಮ್ಮ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೇಸ್ ಗಳನ್ನು ಮುಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಮಧ್ಯೆ ಇಂತಹ ವಿಷಯಗಳನ್ನು ನಾವು ಯಾಕೆ ತೆಗೆದುಕೊಳ್ಳಬೇಕು. ನಮಗೇನು ಸಂಬಂಧವಿದೆ.

ಬಿಎಸ್‍ವೈ ಪುತ್ರ ಹೇಳಿದ್ದೇನು?:
ಸಿಎಂ ಆರೋಪಕ್ಕೆ ಬಿಎಸ್‍ವೈ ಪುತ್ರ ವಿಜಯೇಂದ್ರ ಪ್ರತಿಕ್ರಿಯಿಸಿ, ನಾನು ಐಟಿ ಮುಖ್ಯಸ್ಥರನ್ನು ಭೇಟಿ ಮಾಡಿಯೇ ಇಲ್ಲ. ಐಟಿ ಇಲಾಖೆಯಲ್ಲಿ ಆ ರೀತಿ ಅಧಿಕಾರಿಗಳು ಇದ್ದಾರೆ ಅನ್ನೋದೇ ಗೊತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಕುಮಾರಸ್ವಾಮಿ ಹತ್ತರವೇ ಸರ್ಕಾರ ಇದೆ. ಗುಪ್ತಚರ ಇಲಾಖೆಯೂ ಅವರಲ್ಲೇ ಇದೆ. ಕುಮಾರಸ್ವಾಮಿಯದ್ದು ಅಸ್ಥಿರ ಮನಸ್ಸು. ಅವರು ಬಾಲಿಶ ಹೇಳಿಕೆ ಕೊಡಬಾರದು. ಬಾಯಿಗೆ ಬಂದಂಗೆ ಹೇಳಿಕೆ ಕೊಟ್ಟು ಸಿಎಂ ಸ್ಥಾನದ ಗೌರವ ಕಡಿಮೆ ಮಾಡ್ಕೋಬೇಡಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಎಸ್‍ವೈ ಪುತ್ರ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಎಚ್‍ಡಿಕೆ ಆರೋಪವೇನು? :
ಕೇಂದ್ರದ ತನಿಖಾ ಸಂಸ್ಥೆಗಳ ಮೂಲಕ ಸರ್ಕಾರ ಉರುಳಿಸಲು ಕುತಂತ್ರ ನಡೀತಿದೆ. ಈಗಾಗಲೇ ತನಿಖಾ ಸಂಸ್ಥೆ ಅಧಿಕಾರಿಗಳು ಬೆಂಗಳೂರಿಗೆ ಬಂದಿಳಿದಿದ್ದಾರೆ ಅಂತಾ ಎಚ್‍ಡಿಕೆ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಐಟಿ ಮುಖ್ಯಸ್ಥ ಬಾಲಕೃಷ್ಣನ್ ಜೊತೆ ಬಿಎಸ್‍ವೈ ಪುತ್ರನ ಮೀಟಿಂಗ್ ಮಾಡಿದ್ಯಾಕೆ ಎಂದು ಪ್ರಶ್ನಿಸಿದ ಅವರು, ಎಲ್ಲಾ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಅಂತ ಆರೋಪಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *