‘ಫೇಕ್ ಎಕ್ಸಿಟ್ ಪೋಲ್ಸ್’ – ‘ಕೈ’ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಎಕ್ಸಿಟ್ ಪೋಲ್‍ಗಳಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳು ಲಭಿಸಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ರಾಹುಲ್ ಟ್ವಿಟ್ಟರ್ ಮೂಲಕ ಸಂದೇಶ ನೀಡಿದ್ದು, ಧೈರ್ಯದಿಂದ ಮುಂದಿನ 24 ಗಂಟೆಗಳ ಕಾಲ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ.

ಪ್ರಿಯಾಂಕ ಗಾಂಧಿ ತಮ್ಮ ಟ್ವಿಟ್ಟರ್ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಬೆನ್ನಲ್ಲೇ ರಾಹುಲ್ ಗಾಂಧಿಯೂ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಎಕ್ಸಿಟ್ ಪೋಲ್ ಗಳನ್ನು ಸುಳ್ಳು ವರದಿಗಳು ಎಂದಿದ್ದಾರೆ. ಸತ್ಯದ ಪರ ನಾವು ಹೋರಾಟ ನಡೆಸುತ್ತಿದ್ದು, ಸುಳ್ಳು ಎಕ್ಸಿಟ್ ಪೋಲ್ ಗಳಿಂದ ನೀವು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಡಿ. ನಿಮ್ಮ ಕೆಲಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಪೂರ್ಣಗೊಂಡ ಬಳಿಕ ದೇಶದ ಪ್ರಮುಖ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿದ್ದವು. ಅದರಲ್ಲಿ ಬಹುತೇಕ ಸಮೀಕ್ಷೆಗಳು ಎನ್‍ಡಿಎ ಒಕ್ಕೂಟಕ್ಕೆ 300ಕ್ಕಿಂತ ಹೆಚ್ಚು ಸ್ಥಾನ ಹಾಗೂ ಯುಪಿಎ ಒಕ್ಕೂಟಕ್ಕೆ 122 ಮತ್ತು ಇತರೆ 114 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದವು.

ಮತ ಎಣಿಕೆ ಮುನ್ನ ದಿನ ನಿಮ್ಮ ಆತ್ಮವಿಶ್ವಾಸ ಕಡಿಮೆ ಮಾಡಲು ಇಂತಹ ಸುಳ್ಳು ಮಾಹಿತಿ ನೀಡಲಾಗಿದೆ. ಎಕ್ಸಿಟ್ ಪೋಲ್ ಗಳು ನಿಮ್ಮನ್ನು ನಿರುತ್ಸಾಹಿಯಾಗಿ ಮಾಡುವ ಉದ್ದೇಶವಿದೆ. ನಮ್ಮ ಪ್ರಯತ್ನಗಳು ಫಲ ನೀಡುವ ವಿಶ್ವಾಸ ಇದೆ ಎಂದು ಪ್ರಿಯಾಂಕ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿದ್ದರು.

Comments

Leave a Reply

Your email address will not be published. Required fields are marked *