ಭಾರತಕ್ಕೂ ತೆರಿಗೆ ಶಾಕ್‌ – ಪ್ರತಿ ಸುಂಕದ ಘೋಷಣೆ ಮಾಡಿದ ಟ್ರಂಪ್

– ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರೀ ಹೈಡ್ರಾಮಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಟ್ರಂಪ್ (Donald Trump) ಬೀಸಿದ ಸುಂಕಾಸ್ತ್ರ (Tarrif war) ಈಗ ಭಾರತದ ಬುಡಕ್ಕೂ ಬಂದಿದೆ. ಚೀನಾ (China) ಜೊತೆ ಭಾರತಕ್ಕೂ ಟ್ರಂಪ್ (Donald Trump) ಹೆಚ್ಚುವರಿ ಸುಂಕದ ಶಾಕ್ ನೀಡಿದ್ದಾರೆ.

ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ನಂತರ ಟ್ರಂಪ್ ಇದೇ ಮೊದಲ ಬಾರಿಗೆ ಅಮೆರಿಕಾ ಕಾಂಗ್ರೆಸ್‌ನ(ಅಮೆರಿಕ ಸಂಸತ್ತು) ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.

ಭಾರತ ನಮ್ಮ ಉತ್ಪನ್ನಗಳ ಮೇಲೆ 100% ಹೆಚ್ಚು ಆಟೋ ಟ್ಯಾರೀಫ್‌ ವಿಧಿಸುತ್ತಿದೆ. ಸದ್ಯದ ವ್ಯವಸ್ಥೆಯಿಂದ ಅಮೆರಿಕಾಗೆ ನ್ಯಾಯ ಸಿಗುತ್ತಿಲ್ಲ. ಅದಕ್ಕೆ ಏಪ್ರಿಲ್ 2ರಿಂದ ಆಯಾ ದೇಶಗಳ ಮೇಲೆ ನಾವು ಪ್ರತಿ ಸುಂಕ ವಿಧಿಸುತ್ತೇವೆ. ಅವರು ಎಷ್ಟು ಸುಂಕ ವಿಧಿಸುತ್ತಾರೋ ನಾವೂ ಅಷ್ಟೇ ವಿಧಿಸುತ್ತೇವೆ. ಇದರಿಂದ ಅಮೆರಿಕ ಮತ್ತಷ್ಟು ಶ್ರೀಮಂತ ಆಗಲಿದೆ ಎಂದು ಗುಡುಗಿದ್ದಾರೆ.

ವಾಸ್ತವದಲ್ಲಿ ಏಪ್ರಿಲ್ ಒಂದರಿಂದಲೇ ಜಾರಿ ಮಾಡಬೇಕು ಎಂದಿದ್ದೆ. ಆದರೆ ಏಪ್ರಿಲ್ ಫೂಲ್ ಎಂಬ ಮಿಮ್ಸ್‌ಗೆ ತುತ್ತಾಗಬಾರದೆಂದು ಈ ನಿರ್ಣಯ ಮಾಡಿದ್ದೇನೆ ಎಂದು ಅಮೆರಿಕ ಕಾಂಗ್ರೆಸ್‌ನಲ್ಲಿ ಟ್ರಂಪ್ ಪ್ರಕಟಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?
ನಾಲ್ಕೆಂಟು ವರ್ಷಗಳಲ್ಲಿ ಸಾಧಿಸದೇ ಇದ್ದುದನ್ನು ಬರೀ 43 ದಿನದಲ್ಲಿ ಸಾಧಿಸಿ ತೋರಿಸಿದ್ದೇನೆ. ಇದು ಕೇವಲ ಆರಂಭ ಮಾತ್ರ. ಅಮೆರಿಕದಲ್ಲಿ ಹಳೆಯ ದಿನಗಳು ಮರುಕಳಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮರು ಸ್ಥಾಪನೆಯಾಗಿದೆ. ಇನ್ನು ಎಚ್ಚೆತ್ತುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

ಡ್ರಿಲ್ ಬೇಬಿ ಡ್ರಿಲ್ ಎಂಬ ಪದ ಬಳಕೆ ಮಾಡಿದ ಟ್ರಂಪ್, ತಮ್ಮ ಕಾಲಡಿಯಲ್ಲಿರುವ ದ್ರವರೂಪದ ಬಂಗಾರವನ್ನು ಹೆಚ್ಚೆಚ್ಚು ಹೊರತೆಗೆಯುವ ಘೋಷಣೆ ಮಾಡಿದರು. ಡೋಜ್ ಕಾರ್ಯವೈಖರಿ ಮತ್ತು ಮಸ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಂಪ್‌ ಭಾಷಣಕ್ಕೆ ರಿಪಬ್ಲಿಕನ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆದರೆ ಟ್ರಂಪ್ ಭಾಷಣಕ್ಕೆ ಡೆಮಾಕ್ರಟಿಕ್ ಪಕ್ಷದ ಅಲ್ ಗ್ರೀನ್ ಅಡ್ಡಿಪಡಿಸಲು ಯತ್ನಿಸಿದರು. ನಿಮಗೆ ಆದೇಶಿಸುವ ಹಕ್ಕಿಲ್ಲ. ವೈದ್ಯಕೀಯ ನೆರವು ಕಡಿಮೆ ಮಾಡಿ ಅಂತಾ ಆದೇಶ ಕೊಡೋಕೆ ಆಗಲ್ಲ ಎಂದು ಗುಡುಗಿದರು. ಈ ವೇಳೆ ರಿಪಬ್ಲಿಕನ್ನರು ಅಮೆರಿಕ… ಅಮೆರಿಕ.. ಎಂದು ಕೂಗಿದರು. ಇದರಿಂದ ಕೆಲ ಹೊತ್ತು ಗೊಂದಲದ ಸ್ಥಿತಿ ನಿರ್ಮಾಣ ಆಗಿತ್ತು. ಕಡೆಗೆ ಅಲ್ ಗ್ರೀನ್‌ರನ್ನು ಹೊರಗೆ ಕಳಿಸಲಾಯ್ತು. ಈ ಬೆನ್ನಲ್ಲೇ ಟ್ರಂಪ್ ಭಾಷಣವನ್ನು ಡೆಮಾಕ್ರಟಿಕ್‌ ಸದಸ್ಯರು ಬಹಿಷ್ಕರಿಸಿ ಸಭೆಯಿಂದ ಹೊರನಡೆದರು.

ಚೀನಾ ಗರಂ:
ಅಮೆರಿಕದ ಸುಂಕಾಸ್ತ್ರಕ್ಕೆ ಚೀನಾ ಗರಂ ಆಗಿದೆ. ನಿಮಗೆ ಯುದ್ಧವೇ ಬೇಕು ಎಂದರೆ ನಾವು ಸಿದ್ಧವಿದ್ದೇವೆ. ಕೊನೆಯವರೆಗೂ ಹೋರಾಡುತ್ತೇವೆ ಎಂದು ಚೀನಾ ಘೋಷಿಸಿದೆ.

ಕೆನಡಾ ಸಹ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ. ಅಮೆರಿಕಾಗೆ ವಿದ್ಯುತ್ ಕಡಿತದ ಎಚ್ಚರಿಕೆ ನೀಡಿದೆ.