ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

ವಾಷಿಂಗ್ಟನ್‌/ ಬೀಜಿಂಗ್‌: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ (Trade War) ಈಗ ಆರಂಭವಾಗಿದೆ. ಚೀನಾದ (China) ಮೇಲೆ ವಾಣಿಜ್ಯ ಯುದ್ಧ ಸಾರಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಇದೀಗ ಆ ದೇಶದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ದಿಢೀರ್ ಎಂದು ಡಬಲ್ ಮಾಡಿದ್ದಾರೆ.

10% ಇದ್ದ ಸುಂಕವನ್ನು 20% ಏರಿಸಿದ್ದಾರೆ. ಫೆಂಟನಿಲ್ ಡ್ರಗ್ಸ್ (Drugs) ಅಕ್ರಮ ಸಾಗಣೆ ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂಬ ಕಾರಣ ನೀಡಿ ಟ್ರಂಪ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

ಅಮೆರಿಕ (USA) ಸುಂಕ ಏರಿಸಿದ ಬೆನ್ನಲ್ಲೇ ಚೀನಾ ಸಹ ಅಮೆರಿಕದ ಉತ್ಪನ್ನಗಳ ಮೇಲೆ 10% ರಿಂದ 15% ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದೇ ವೇಳೆ, ಐರೋಪ್ಯ ಒಕ್ಕೂಟದ ಜೊತೆಗಿನ ಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಚೀನಾ ಮುಂದಾಗಿದೆ. ಅಮೆರಿಕದ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಇಯು ಜೊತೆ ಕೆಲಸ ಮಾಡಲು ಸಿದ್ಧ ಇದ್ದೇವೆ ಎಂದು ಚೀನಾ ಘೋಷಿಸಿದೆ.

ಕೆನಡಾ, ಮೆಕ್ಸಿಕೋ ಉತ್ಪನ್ನಗಳ ಮೇಲೆ ಟ್ರಂಪ್ ವಿಧಿಸಿದ್ದ 25% ಸುಂಕ ನೀತಿ ಇಂದಿನಿಂದ ಜಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮದ್ಯ, ಹಣ್ಣು ಸೇರಿ 107 ಬಿಲಿಯನ್ ಡಾಲರ್ ಉತ್ಪನ್ನಗಳ ಮೇಲೆ ಕೆನಡಾ ಸಹ 25% ಸುಂಕ ವಿಧಿಸಿದ್ದು, ಇಂದು ಸಂಜೆಯಿಂದ ಜಾರಿಗೆ ತಂದಿದೆ.

ಸುಂಕದ ಯುದ್ಧದ ಪರಿಣಾಮ ವಿಶ್ವ ಮಾರುಕಟ್ಟೆ ಮೇಲಾಗಿದ್ದು ಷೇರು ಮಾರುಕಟ್ಟೆ ಪತನಗೊಂಡಿದೆ. ಸುಂಕದ ಹೆಸರಿನಲ್ಲಿ ಟ್ರಂಪ್ ಚೆಲ್ಲಾಟ ಆಡುತ್ತಿದ್ದಾರೆ ಎಂದು ದಿಗ್ಗಜ ಹೂಡಿಕೆದಾರ ವಾರೆನ್ ಬಫೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.