ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ: ಹಿಂದಿಯಲ್ಲಿ ಟ್ರಂಪ್ ಟ್ವೀಟ್

ನವದೆಹಲಿ: ನಾನು ಈಗಾಗಲೇ ಹೊರಟಿದ್ದೇನೆ, ದಾರಿ ಮಧ್ಯೆ ಇದ್ದೇನೆ ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿ ಈ ಮಾಹಿತಿ ನೀಡಿರುವ ಅವರು, ಭಾರತಕ್ಕೆ ಆಗಮಿಸಲು ಕಾತುರನಾಗಿದ್ದು, ದಾರಿ ಮಧ್ಯೆ ಇದ್ದೇನೆ ಇನ್ನೇನು ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸೇರುತ್ತೇನೆ. ನಾವೆಲ್ಲರೂ ಸೇರೋಣ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಅತಿಥಿ ದೇವೋ ಭವಃ ಎಂದು ಟ್ವೀಟ್‍ಗೆ ಉತ್ತರಿಸಿದ್ದಾರೆ.

ಟ್ರಂಪ್ ಆಗಮನಕ್ಕಾಗಿ ಗುಜರಾತ್ ಸಂಪೂರ್ಣ ಸನ್ನದ್ಧವಾಗಿದ್ದು, ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಅಹಮದಾಬಾದ್‍ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ತೆರಳಿ ಟ್ರಂಪ್ ದಂಪತಿಯನ್ನು ಬರಮಾಡಿಕೊಳ್ಳಲಿದ್ದಾರೆ. ಇಂದು ಬೆಳಗ್ಗೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‍ನ ಅಮೆರಿಕ ಅಧ್ಯಕ್ಷರ ಏರ್‍ಫೋರ್ಸ್ ಒನ್ ವಿಮಾನ ಬಂದಿಳಿಯಲಿದೆ. ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅಳಿಯ ಜ್ಯಾರೆಡ್ ಕುಶ್ನರ್ ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ನಿಯೋಗದೊಂದಿಗೆ ಟ್ರಂಪ್ ಆಗಮಿಸುತ್ತಿದ್ದಾರೆ.

ನಂತರ ಏರ್‍ಪೋರ್ಟ್‍ನಿಂದ ಮೋದಿ ಮತ್ತು ಟ್ರಂಪ್ 22 ಕಿ.ಮೀ. ರೋಡ್ ಶೋ ಮೂಲಕ ಮೊಟೆರಾ ಸ್ಟೇಡಿಯಂಗೆ ಸಾಗಲಿದ್ದಾರೆ. ಸ್ವಾಗತ ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಅದ್ಧೂರಿ ಅಲಂಕಾರ ಮಾಡಲಾಗಿದ್ದು, ಇಕ್ಕೆಲಗಳಲ್ಲಿ ಜಮಾಯಿಸಲಿರುವ ಲಕ್ಷಾಂತರ ಜನ ದೊಡ್ಡಣ್ಣನಿಗೆ ಜೈಕಾರ ಕೂಗಲಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕಾಗಿ ಭರ್ಜರಿಯಾಗಿಯೇ ಸಿದ್ಧತೆ ನಡೆಸಲಾಗಿದೆ. ಇದೇ ವೇಳೆ ಮಧ್ಯಾಹ್ನ 12.15ಕ್ಕೆ ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿ ನೀಡಲಿದ್ದು, ಅಲ್ಲಿ ಅರ್ಧಗಂಟೆ ಕಾಲ ಕಳೆಯಲಿದ್ದಾರೆ.

`ನಮಸ್ತೆ ಟ್ರಂಪ್’ ಕಾರ್ಯಕ್ರಮ
ರೋಡ್ ಶೋ ಬಳಿಕ ವಿಶ್ವದಲ್ಲೇ ಅತೀ ದೊಡ್ಡದಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ತರುವಾಯ 1 ಲಕ್ಷ ಜನ ಸಾಕ್ಷಿ ಆಗಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕಾಗಿ ಮೊಟೆರಾ ಸರ್ವಾಂಗ ಸುಂದರವಾಗಿ ಸಜ್ಜಾಗಿದೆ. ಈ ಹಿಂದೆ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಮೋದಿಗಾಗಿ ‘ಹೌಡಿ ಮೋದಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಇದೀಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿದೆ.

Comments

Leave a Reply

Your email address will not be published. Required fields are marked *