ಅಮೆರಿಕದಿಂದ ಮಸ್ಕ್‌ ಗಡಿಪಾರು ಆಗ್ತಾರಾ? – ಸಿಟ್ಟು ಹೊರ ಹಾಕಿ ಟ್ರಂಪ್‌ ವಾರ್ನಿಂಗ್‌

ವಾಷಿಂಗ್ಟನ್‌: ಅಮೆರಿಕದಿಂದ ಎಲೋನ್‌ ಮಸ್ಕ್‌ ಅವರನ್ನು ಗಡಿಪಾರು ಮಾಡಲಾಗುತ್ತಾ ಹೀಗೊಂದು ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಮಾಡಿದ ಒಂದು ಪೋಸ್ಟ್‌.

ನಮ್ಮ ಸಬ್ಸಿಡಿ ಇಲ್ಲದಿದ್ದರೆ ಎಲಾನ್ ಮಸ್ಕ್ (Elon Musk) ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ (South Africa) ಹೋಗಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಮಸ್ಕ್ ಅವರನ್ನು ಗಡಿಪಾರು ಮಾಡಬಹುದೇ ಎಂದು ವರದಿಗಾರರು ಕೇಳಿದ್ದಕ್ಕೆ ಟ್ರಂಪ್‌ “ನನಗೆ ಗೊತ್ತಿಲ್ಲ, ನಾವು ನೋಡಬೇಕು ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಪಾರ್ಟಿ’; ಹೊಸ ರಾಜಕೀಯ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಮಸ್ಕ್

ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆ ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌, ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅನುಮೋದಿಸುವ ಮೊದಲೇ ಅವರಿಗೆ ನಾನು ಇವಿ ಆದೇಶವನ್ನು ಬಲವಾಗಿ ವಿರೋಧಿಸುತ್ತೇನೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಕುಟುಕಿದ್ದಾರೆ.

ಇವಿ ವಿರೋಧಿಸುವುದು ನನ್ನ ಅಭಿಯಾನದ ಒಂದು ಭಾಗವಾಗಿತ್ತು. ಈಗ ಈ ನಿರ್ಧಾರವನ್ನು ವಿರೋಧಿಸುವುದು ಹಾಸ್ಯಾಸ್ಪದವಾಗಿದೆ. ಇತಿಹಾಸದಲ್ಲಿ ಮಸ್ಕ್‌ಗಿಂತ ಯಾರು ಅತಿ ಹೆಚ್ಚು ಸಬ್ಸಿಡಿ ಪಡೆದಿರಲಾರರು. ಸಬ್ಸಿಡಿ ಇಲ್ಲದೇ ಇದ್ದರೆ ಮಸ್ಕ್‌ ತಮ್ಮ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗಿತ್ತು. ಇನ್ನು ಮುಂದೆ ರಾಕೆಟ್ ಉಡಾವಣೆಗಳು, ಉಪಗ್ರಹಗಳು ಅಥವಾ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇರುವುದಿಲ್ಲ. ನಾವು ಬಹಳಷ್ಟು ಹಣವನ್ನು ಉಳಿಸಬೇಕು ಎಂದು ಬರೆದಿದ್ದಾರೆ.

ಟ್ರಂಪ್ ಜಾರಿಗೆ ತರಲು ಹೊರಟಿರುವ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ ತೆರಿಗೆಯಿಂದ ಹಿಡಿದು ಇನ್ಶುರೆನ್ಸ್, ಮಿಲಿಟರಿ, ಗಡಿ ವಿಚಾರಗಳನ್ನೂ ಒಳಗೊಂಡಿದೆ. ಇದು 4.2 ಟ್ರಿಲಿಯನ್ ಡಾಲರ್ (360 ಲಕ್ಷ ಕೋಟಿ ರೂ) ಮೌಲ್ಯದ ಶಾಸನ ಎಂದು ವರ್ಣಿತವಾಗುತ್ತಿದೆ. 1,000 ಪುಟಗಳ ಈ ಮಹಾ ಮಸೂದೆಯು ಅಮೆರಿಕನ್ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಹಾದಿಯಲ್ಲಿದೆ. ಅಮೆರಿಕದ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ಅನುಮೋದನೆ ಸಿಕ್ಕಿದೆ. ಮೇಲ್ಮನೆಯಾದ ಸೆನೆಟ್‌ನಲ್ಲಿ ಪ್ರಾಥಮಿಕ ಅನುಮೋದನೆ ಪಡೆದಿದೆ.