ಚೀನಾ ಮೇಲೆ 100% ಸುಂಕ ವಿಧಿಸಿದ ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಚೀನಾದ (China) ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕವನ್ನು (Tariff) ಘೋಷಿಸಿದ್ದಾರೆ.

ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ನಿರ್ಬಂಧಕ್ಕೆ ಸಂಬಂಧಿಸಿದಂತೆ ಚೀನಾ ಜೊತೆಗಿನ ಅಮೆರಿಕ ವ್ಯಾಪಾರ ಯುದ್ಧವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌

ಚೀನಾ ಕೆಲವೊಂದು ಅಸಾಧಾರಣ ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪ್ರತಿಕಾರವಾಗಿ, ಎಲ್ಲಾ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲಿನ ಹೆಚ್ಚುವರಿ ಸುಂಕಗಳು ನ.1ರಿಂದಲೇ ಜಾರಿಗೆ ಬರಲಿವೆ. ಯುಎಸ್‌ ರಫ್ತು ನಿಯಂತ್ರಣಗಳು ಸಹ ಜಾರಿಗೆ ಬರಲಿವೆ ಎಂದು ಟ್ರೂತ್‌ ಸೋಷಿಯಲ್‌ನಲ್ಲಿ ಟ್ರಂಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತೆ ಭುಗಿಲೆದ್ದಂತೆ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಾಸ್ಡಾಕ್ ಶೇ.3.6 ರಷ್ಟು ಮತ್ತು ಎಸ್ & ಪಿ 500 ಶೇ.2.7 ರಷ್ಟು ಕುಸಿದಿವೆ. ಇದನ್ನೂ ಓದಿ: ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

ಫೆಂಟನಿಲ್ ವ್ಯಾಪಾರದಲ್ಲಿ ಚೀನಾ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಈಗಾಗಲೇ ಟ್ರಂಪ್ ಸುಂಕ ಹೇರಿದ್ದರು. ಹೀಗಾಗಿ, ಚೀನಾದ ಸರಕುಗಳು ಪ್ರಸ್ತುತ ಯುಎಸ್ ಶೇ.30 ರಷ್ಟು ಸುಂಕವನ್ನು ಎದುರಿಸುತ್ತಿವೆ.