ಬಾಲಿವುಡ್ ಚಿತ್ರಕ್ಕೆ ‘ಗ್ರೇಟ್’ ಎಂದ ಟ್ರಂಪ್

ಬೆಂಗಳೂರು: ಹತ್ತಾರು ದೇಶಗಳ ಚಿತ್ರಗಳಿಗೆ ಪ್ರತಿಕ್ರಿಯೆ ನೀಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಚಿತ್ರವೊಂದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಚಿತ್ರವೊಂದಕ್ಕೆ ಡೊನಾಲ್ಡ್ ಟ್ರಂಪ್ ‘ಗ್ರೇಟ್’ ಅಂದಿದ್ದು, ಭಾರತಕ್ಕೆ ಆಗಮಿಸುವ ಹೊತ್ತಿನಲ್ಲೇ ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನ ಅಭಿನಯದ ‘ಶುಭ್ ಮಂಗಳ್ ಜ್ಯಾದ ಸಾವಧಾನ್’ ಚಿತ್ರದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಇದೀಗ ವಿಶ್ವದ ಹಿರಿಯಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾತ್ರಿಯ ದಿನ ಅಂದ್ರೆ ಫೆಬ್ರವರಿ 21ಕ್ಕೆ ‘ಶುಭ್ ಮಂಗಳ್ ಜ್ಯಾದ ಸಾವಧಾನ್’ ಸಿನಿಮಾ ದೇಶ ವಿದೇಶಗಳಲ್ಲಿ ತೆರೆ ಕಂಡಿದೆ. ಇದು ಸಲಿಂಗ ಕಾಮದ ವಿಷಯವನ್ನಾಧರಿಸಿದ ಚಿತ್ರವಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲು ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು ಇದರ ನಡುವೆಯೇ ಇದೀಗ ಟ್ರಂಪ್ ಮೆಚ್ಚಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ ಪೀಟರ್ ಟ್ಯಾಚೆಲ್ ಈ ಸಿನಿಮಾದ ಬಗ್ಗೆ ಇತ್ತೀಚಿಗೆ ಟ್ವೀಟ್ ಮಾಡಿದ್ದರು. ಸಲಿಂಗಕಾಮಿಗಳ ಪ್ರಣಯದ ಬಗ್ಗೆ ಇರುವ ಬಾಲಿವುಡ್‍ನ ಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮನ ಗೆಲ್ಲುವ ಆಶಯ ಹೊಂದಿದೆ ಎಂದು ಬರೆದುಕೊಂಡಿದ್ದರು. ಪೀಟರ್ ಟ್ಯಾಚೆಲ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಗ್ರೇಟ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಇದೆ ತಿಂಗಳು 24ಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಭಾರತಕ್ಕೆ ಭೇಟಿ ನೀಡುವ ಮೊದಲು ಹಿಂದಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

‘ಶುಭ್ ಮಂಗಳ್ ಜ್ಯಾದ ಸಾವಧಾನ್’ ಹಿತೇಶ್ ಕೇವಲ್ಯ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಆಯುಷ್ಮಾನ್ ಖುರಾನ ಜೊತೆ ಜಿತೇಂದ್ರ ಕುಮಾರ್, ನೀನಾ ಗುಪ್ತ ಸೇರಿದಂತೆ ಸಾಕಷ್ಟು ಮಂದಿ ಅಭಿನಯಿಸಿದ್ದಾರೆ. ಚಿತ್ರ ಸಹ ಉತ್ತಮ ಪ್ರದರ್ಶನ ಕಾಣುತ್ತಿದೆ.

Comments

Leave a Reply

Your email address will not be published. Required fields are marked *